ಪೆಗಾಸಸ್ ಪ್ರಕರಣ: ಮೂವರು ಸದಸ್ಯರ ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್
'ಸರಕಾರದಿಂದ ಅಸ್ಪಷ್ಟ ನಿರಾಕರಣೆ ಸಾಕಾಗುವುದಿಲ್ಲ'

ಹೊಸದಿಲ್ಲಿ,ಅ.27: ಕೇಂದ್ರ ಸರಕಾರಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿರುವ ಬೆಳವಣಿಗೆಯಲ್ಲಿ ಪತ್ರಕರ್ತರು,ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳ ಮೇಲೆ ನಿಗಾಯಿರಿಸಲು ಇಸ್ರೇಲ್ ನಿರ್ಮಿತ ಪೆಗಾಸಸ್ ತಂತ್ರಾಂಶವನ್ನು ಬಳಸಲಾಗಿತ್ತು ಎಂಬ ಆರೋಪಗಳು ಮೂಲಭೂತ ಹಕ್ಕುಗಳ ಕುರಿತಾಗಿವೆ ಮತ್ತು ಮತ್ತು ಇವು ತೀವ್ರವಾದ ಪರಿಣಾಮವನ್ನು ಹೊಂದಿರಹುದಾಗಿದೆ ಎಂದು ಬುಧವಾರ ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ಆರೋಪಗಳ ವಿಚಾರಣೆಗಾಗಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಆರ್.ವಿ.ರವೀಂದ್ರನ್ ಅವರ ಉಸ್ತುವಾರಿಯಲ್ಲಿ ಮೂವರು ತಾಂತ್ರಿಕ ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ಸರಕಾರದಿಂದ ಅಸ್ಪಷ್ಟ ನಿರಾಕರಣೆಯು ಸಾಲುವುದಿಲ್ಲ ಎಂದು ಕಟುವಾಗಿ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಸರಕಾರಕ್ಕೆ ವಿಫುಲ ಅವಕಾಶಗಳನ್ನು ನೀಡಲಾಗಿದ್ದರೂ ಅದು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಕೇಂದ್ರವು ಆರೋಪಗಳನ್ನು ನಿರ್ದಿಷ್ಟವಾಗಿ ನಿರಾಕರಿಸಿಲ್ಲ ಎಂದು ಬೆಟ್ಟು ಮಾಡಿತು.
ರಾಷ್ಟ್ರೀಯ ಭದ್ರತೆ ಉದ್ದೇಶಗಳಿಗಾಗಿ ಕಾನೂನುಸಮ್ಮತ ಪ್ರತಿಬಂಧ ಕುರಿತು ಸರಕಾರದ ಹೇಳಿಕೆಗಳಿಗೂ ಪ್ರತಿಕ್ರಿಯಿಸಿದ ನ್ಯಾಯಾಲಯವು,ರಾಷ್ಟ್ರೀಯ ಭದ್ರತೆಯ ವಿಷಯವನ್ನೆತ್ತಿದ ಪ್ರತಿ ಸಂದರ್ಭದಲ್ಲಿಯೂ ಸರಕಾರವು ‘ಉಚಿತ ಪಾಸ್’ ಅಥವಾ ವಿನಾಯಿತಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಸರಕಾರವು ವಿರೋಧಿಯಾಗುವಂತಿಲ್ಲ ಎಂದು ಹೇಳಿತು.
ನಿವೃತ್ತ ನ್ಯಾ.ಆರ್.ವಿ.ರವೀಂದ್ರನ್ ನೇತೃತ್ವದ ವಿಚಾರಣಾ ಸಮಿತಿಗೆ ಮಾಜಿ ಐಪಿಎಸ್ ಅಧಿಕಾರಿ ಅಲೋಕ ಜೋಶಿ ಮತ್ತು ಇಂಟರ್‌ನ್ಯಾಷನಲ್ ಆರ್ಗನೈಸೇಷನ್ ಆಫ್ ಸ್ಟಾಂಡರ್ಡ್ಯೈಸೇಷನ್‌ನ ಉಪಸಮಿತಿಯ ಅಧ್ಯಕ್ಷ ಸಂದೀಪ ಒಬೆರಾಯ್ ಅವರು ನೆರವಾಗಲಿದ್ದಾರೆ. ಗುಜರಾತಿನ ಗಾಂಧಿನಗರದ ವಿಧಿವಿಜ್ಞಾನ ವಿವಿಯ ಡೀನ್ ನವೀನಕುಮಾರ ಚೌಧರಿ, ಕೇರಳದ ಅಮೃತಾಪುರಿಯ ಅಮೃತ ವಿಶ್ವ ವಿದ್ಯಾಪೀಠಮ್‌ನ ಪ್ರೊ.ಪ್ರಭಹರನ್ ಪಿ.ಮತ್ತು ಐಐಟಿ-ಬಾಂಬೆಯ ಪ್ರೊ.ಅಶ್ವಿನ್ ಅನಿಲ ಗುಮಾಸ್ತೆ ಅವರು ಸಮಿತಿಯ ತಾಂತ್ರಿಕ ಸದಸ್ಯರಾಗಿರಲಿದ್ದಾರೆ. ತ್ವರಿತವಾಗಿ ತನಿಖೆಯನ್ನು ನಡೆಸುವಂತೆ ಮತ್ತು ಎರಡು ತಿಂಗಳುಗಳ ಬಳಿಕ ಮುಂದಿನ ವಿಚಾರಣೆಯೊಳಗೆ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ತಜ್ಞರ ಸಮಿತಿಯೊಂದನ್ನು ರಚಿಸಬೇಕೆಂಬ ಸರಕಾರದ ಕೋರಿಕೆಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಹಿಮಾ ಕೊಹ್ಲಿ ಅವರನ್ನೂ ಒಳಗೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ,ಹಾಗೆ ಮಾಡುವುದು ಪಕ್ಷಪಾತದ ವಿರುದ್ಧ ಸ್ಥಾಪಿತ ನ್ಯಾಯಾಂಗ ತತ್ತ್ವವನ್ನು ಉಲ್ಲಂಘಿಸುತ್ತದೆ ಎಂದು ಸ್ಪಷ್ಟಪಡಿಸಿತು.
‘ನೀವು ರಹಸ್ಯವೊಂದನ್ನು ಇಟ್ಟುಕೊಳ್ಳಲು ಬಯಸಿದರೆ ಅದನ್ನು ನಿಮ್ಮಿಂದಲೂ ಮರೆ ಮಾಚಬೇಕಾಗುತ್ತದೆ ’ಎಂಬ ಬ್ರಿಟಿಷ್ ಸಾಹಿತಿ ಜಾರ್ಜ್ ಆರ್ವೆಲ್‌ರ ‘1984’ ಕಾದಂಬರಿಯಲ್ಲಿನ ಉಕ್ತಿಯನ್ನು ಉಲ್ಲೇಖಿಸುವ ಮೂಲಕ ತೀರ್ಪನ್ನು ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ರಮಣ ಅವರು,‘ಪ್ರಕರಣದಲ್ಲಿ ನೇರ ಸಂತ್ರಸ್ತರಿಂದ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ನ್ಯಾಯ ನೀಡುವುದು ಮಾತ್ರವಲ್ಲ,ಅದು ನಡೆಯುವಂತೆಯೂ ನೋಡಿಕೊಳ್ಳಬೇಕಿದೆ. ಈ ನ್ಯಾಯಾಲಯವು 2019ರಿಂದ ಪೆಗಾಸಸ್ ದಾಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಸಲು ಸರಕಾರಕ್ಕೆ ವಿಫುಲ ಸಮಯಾವಕಾಶವನ್ನು ನೀಡಲಾಗಿತ್ತು.
ಆದಾಗ್ಯೂ ಯಾವುದೇ ಬೆಳಕು ಚೆಲ್ಲದ ಸೀಮಿತ ಅಫಿಡವಿಟ್ ಸಲ್ಲಿಸಲಾಗಿತ್ತು. ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಗೊಳಿಸಿದ್ದರೆ ನಮ್ಮ ಮೇಲಿನ ಹೊರೆಯು ಕಡಿಮೆಯಾಗುತ್ತಿತ್ತು’ ಎಂದು ಹೇಳಿದರು.
ಸರಕಾರಗಳಿಗೆ ಮಾತ್ರ ಮಾರಾಟ ಮಾಡಲಾಗಿದ್ದ ಪೆಗಾಸಸ್ ಬೇಹುಗಾರಿಕೆ ತಂತ್ರಾಂಶವನ್ನು ಪ್ರತಿಪಕ್ಷ ನಾಯಕರು,ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಿಕೊಳ್ಳಲು ಬಳಸಲಾಗಿತ್ತು ಎಂಬ ಆರೋಪಗಳ ಬಗ್ಗೆ ತನಿಖೆಗೆ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ 12 ಅರ್ಜಿಗಳು ಕರೆ ನೀಡಿವೆ. ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ,ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಸರ್ವೋಚ್ಚ ನ್ಯಾಯಾಲಯದ ವಕೀಲ ಎಂ.ಎಲ್.ಶರ್ಮಾ,ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಪತ್ರಕರ್ತರು ಸೇರಿದಂತೆ ಅರ್ಜಿದಾರರು ಪೆಗಾಸಸ್ ಬಳಸಿ ಅನಧಿಕೃತ ಕಣ್ಗಾವಲು ಕುರಿತು ವಿವರಗಳನ್ನು ಸಲ್ಲಿಸಲು ಸರಕಾರಕ್ಕೆ ಆದೇಶಿಸುವಂತೆ ನ್ಯಾಯಾಲಯವನ್ನು ಕೋರಿಕೊಂಡಿದ್ದರು.
ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಮತ್ತು ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಅರ್ಜಿದಾರರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ ಪೀಠವು,ತಮ್ಮ ಮೂಲಭೂತ ಹಕ್ಕುಗಳ ದುರುಪಯೋಗದಿಂದ ಜನರನ್ನು ರಕ್ಷಿಸುವಲ್ಲಿ ನಾವು ಎಂದೂ ಹಿಂದುಳಿದಿಲ್ಲ ಎಂದು ಹೇಳಿತು.
ಖಾಸಗಿತನದ ಹಕ್ಕಿನ ಬಗ್ಗೆ ಚರ್ಚೆಗಳು ಅಗತ್ಯವಿವೆ ಎಂದು ಹೇಳಿದ ನ್ಯಾಯಾಧೀಶರು,ಏಜೆನ್ಸಿಗಳು ಭಯೋತ್ಪಾದನೆಯ ವಿರುದ್ಧ ಹೋರಾಡಲು ಕಣ್ಗಾವಲನ್ನು ಬಳಸಿವೆ ಮತ್ತು ಖಾಸಗಿತನದ ಅತಿಕ್ರಮಣ ಅಗತ್ಯವಾಗಿಬಹುದು,ಆದರೆ ನ್ಯಾಯಾಲಯವು ಷರತ್ತನ್ನು ಹೊಂದಿತ್ತು. ಖಾಸಗಿತನ ಕೇವಲ ಪತ್ರಕರ್ತರು ಮತ್ತು ರಾಜಕಾರಣಿಗಳಿಗಾಗಿ ಅಲ್ಲ,ಅದು ವ್ಯಕ್ತಿಗಳ ಹಕ್ಕುಗಳ ಕುರಿತಾಗಿಯೂ ಇದೆ. ಖಾಸಗಿತನದ ಹಕ್ಕುಗಳಿಗೆ ನಿರ್ಬಂಧಗಳಿವೆ,ಆದರೆ ಈ ನಿರ್ಬಂಧಗಳು ಸಾಂವಿಧಾನಿಕ ಪರಿಶೀಲನೆಗೆ ಅನುಗುಣವಾಗಿರಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವಾಗಿರುವ ಪತ್ರಿಕಾ ಸ್ವಾತಂತ್ರ ಮತ್ತು ಪತ್ರಕರ್ತರ ಮೂಲಗಳ ರಕ್ಷಣಗಾಗಿಯೂ ಅರ್ಜಿಗಳು ಕಳವಳಗಳನ್ನೆತ್ತಿವೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.