ಆರೆಸ್ಸೆಸ್ ಅನ್ನು ʼಭಯೋತ್ಪಾದಕ' ಸಂಘಟನೆ ಎಂದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮ.ಪ್ರ ಹೈಕೋರ್ಟ್
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ʼಭಯೋತ್ಪಾದಕ' ಸಂಘಟನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ ವ್ಯಕ್ತಿಯೊಬ್ಬನಿಗೆ ಮಧ್ಯಪ್ರದೇಶ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಅತುಲ್ ಪಾಸ್ಟರ್ ಎಂಬ ವ್ಯಕ್ತಿ ತನ್ನ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ಆರೆಸ್ಸೆಸ್ ಅನ್ನು `ತಾಲಿಬಾನ್ ಭಯೋತ್ಪಾದಕ ಸಂಘಟನೆ' ಎಂದು ವರ್ಣಿಸಿದ್ದ ಪೋಸ್ಟ್ ವೈರಲ್ ಆದ ನಂತರ ಆತನ ವಿರುದ್ಧ ಐಪಿಸಿ ಸೆಕ್ಷನ್ 153, 295, 505 (1) ಹಾಗೂ 505(2) ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಆತ ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾರೆ ಎಂದು ಮಧ್ಯಪ್ರದೇಶ ಸರಕಾರ ಆರೋಪಿಸಿದ್ದರೆ ಆರೋಪಿ ಪರ ವಕೀಲ ಮಾತ್ರ ತಮ್ಮ ಕಕ್ಷಿಗಾರನ ಮೇಲೆ ತಪ್ಪಾಗಿ ಆರೋಪಿಸಲಾಗಿದೆ ಹಾಗೂ ಯಾವುದೇ ಧರ್ಮ ಅಥವಾ ಸಂಘಟನೆ ಕುರಿತಂತೆ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ಆದರೆ ಆರೋಪಿಯ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಆತನ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಿದೆ.
ಆರೋಪಿಗಳ ಜಾಮೀನು ಪಡೆಯುವ ಹಕ್ಕು ಒಂದು ಮೂಲಭೂತ ಹಕ್ಕೆಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಹಾಗೂ ಇತರ ಹೈಕೋರ್ಟ್ಗಳು ತಮ್ಮ ಈ ಹಿಂದಿನ ತೀಪುಗಳಲ್ಲಿ ತಿಳಿಸಿದ್ದವೆಂಬುದನ್ನು ಇಲ್ಲಿ ಸ್ಮರಿಸಬಹುದು.
ಪ್ರಧಾನಿ ಮೋದಿಯ `ಆಕ್ಷೇಪಾರ್ಹ' ರೀತಿಯ ಚಿತ್ರವನ್ನು ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.