ಪೂರ್ವಾಂಚಲ: ಬಿಜೆಪಿಯನ್ನು ಸೋಲಿಸಲು "ಖದೇರಾ ಹೋಬ್"

ಫೋಟೊ - PTI
ವಾರಣಾಸಿ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪೂರ್ವಾಂಚಲ ಭಾಗದಲ್ಲಿ 2017ರ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ಬಿಜೆಪಿಯ ಪ್ರಯತ್ನವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಹೊಸದಾಗಿ ಹೆಣೆಯಲಾದ "ಕೆಂಪು-ಹಳದಿ" ಮೈತ್ರಿ ಖದೇರಾ ಹೋಬ್ ಘೋಷಣೆಯೊಂದಿಗೆ ಕೇಸರಿ ಪಕ್ಷಕ್ಕೆ ಸೋಲುಣಿಸುವ ಉತ್ಸಾಹದಲ್ಲಿದೆ.
2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರ ಪ್ರಮುಖ ಅಸ್ತ್ರ ಎನಿಸಿದ್ದ "ಖೇಲಾ ಹೋಬ್" ಘೋಷಣೆಯಿಂದ ಸ್ಫೂರ್ತಿ ಪಡೆದ ಸಮಾಜವಾದಿ ಪಕ್ಷ ಮತ್ತು ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ (ಎಸ್ಬಿಎಸ್ಪಿ) "ಖದೇರಾ ಹೋಬ್" (ಹೊಡೆದೋಡಿಸಿ) ಘೋಷಣೆಯೊಂದಿಗೆ ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಸಜ್ಜಾಗುತ್ತಿವೆ. 403 ಸದಸ್ಯ ಬಲದ ವಿಧಾನಸಭೆಯಲ್ಲಿ 156 ಸದಸ್ಯರನ್ನು ಆರಿಸಿ ಕಳುಹಿಸುವ ಪೂರ್ವಾಂಚಲ ಪ್ರದೇಶ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ.
ಎಸ್ಬಿಎಸ್ಪಿಯ 19ನೇ ಸಂಸ್ಥಾಪನಾ ದಿನ ಅಂಗವಾಗಿ ಪೂರ್ವ ಉತ್ತರ ಪ್ರದೇಶದ ಮಾವು ಜಿಲ್ಲೆಯ ಹಲ್ದಾರ್ ಪುರದಲ್ಲಿ ಹೊಸ ಮೈತ್ರಿಕೂಟ ತನ್ನ ಮಹಾಪಂಚಾಯತ್ ಆಯೋಜಿಸಿತ್ತು. ಎಸ್ಬಿಎಸ್ಪಿ ಅತ್ಯಂತ ಹಿಂದುಳಿದ ವರ್ಗವಾದ ರಾಜಭಾರ್ ಜಾತಿಯನ್ನು ಪ್ರತಿನಿಧಿಸುತ್ತದೆ. ವಾರಣಾಸಿ ಮತ್ತು ಬಲ್ಲಿಯಾ ಪ್ರದೇಶದ 30-40 ಸ್ಥಾನಗಳಲ್ಲಿ ಈ ಸಮಾಜದ ಜನ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಎಸ್ಬಿಎಸ್ಪಿ ಕಟ್ಟಿಕೊಂಡಿದ್ದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಸಿಎಂ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಎಸ್ಬಿಎಸ್ಪಿ ಮುಖ್ಯಸ್ಥರು ಸಮಾಜವಾದಿ ಪಕ್ಷದ ಕೆಂಪು ಟೊಪ್ಪಿ ಧರಿಸಿ ಗಮನ ಸೆಳೆದರು.