ಹರ್ಯಾಣ: ಪ್ರತಿಭಟನಾ ಸ್ಥಳದಲ್ಲಿದ್ದ ಮಹಿಳಾ ರೈತರ ಮೇಲೆ ಹರಿದ ಟ್ರಕ್; ಮೂವರು ಮೃತ್ಯು

Photo: Indianexpress
ಹೊಸದಿಲ್ಲಿ: ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ಕೊಲೆಗೈದು ಹಿಂಸಾಚಾರ ನಡೆದ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ವರದಿಯಾಗಿದೆ. ದಿಲ್ಲಿ-ಹರ್ಯಾಣ ಗಡಿಯಲ್ಲಿ ರೈತರ ಪ್ರತಿಭಟನಾ ಸ್ಥಳದಲ್ಲಿ ವೇಗವಾಗಿ ಬಂದ ಟ್ರಕ್ ಒಂದು ಡಿವೈಡರ್ ಮೇಲೆ ಹರಿದ ಪರಿಣಾಮ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಟ್ರಕ್ ಢಿಕ್ಕಿ ಹೊಡೆದ ವೇಳೆ ಮಹಿಳೆಯರು ಡಿವೈಡರ್ ಮೇಲೆ ಕುಳಿತು ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಅಪಘಾತ ಸ್ಥಳದಿಂದ ಟ್ರಕ್ ಚಾಲಕ ಕೂಡಲೇ ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಮಹಿಳೆಯರು ಪಂಜಾಬ್ನ ಮಾನ್ಸಾ ಜಿಲ್ಲೆಗೆ ಸೇರಿದವರಾಗಿದ್ದಾರೆ. ಕೇಂದ್ರ ಸರಕಾರದ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ರೈತರು ಕಳೆದ ೧೧ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
Next Story