ಭಾರತ-ಪಾಕಿಸ್ತಾನ ಫೈನಲ್ ಎದುರು ನೋಡುತ್ತಿರುವ ಸಕ್ಲೇನ್ ಮುಶ್ತಾಕ್
photo:twitter/@itsWorldNewss
ದುಬೈ, ಅ. 28: ಐಸಿಸಿ ಟಿ-20 ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಮುಖಾಮುಖಿಯಾಗುವುದನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಧ್ಯಾಂತರ ಪ್ರಧಾನ ಕೋಚ್ ಸಕ್ಲೇನ್ ಮುಶ್ತಾಕ್ ಎದುರು ನೋಡುತ್ತಿದ್ದಾರೆ.
ಇತ್ತೀಚೆಗೆ ನಡೆದ ಸೂಪರ್ 12 ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮುಖಾಮುಖಿಯನ್ನು ಅವರು ಆನಂದಿಸಿದ್ದಾರೆ. ಪಂದ್ಯದ ಫಲಿತಾಂಶ ಏನಿದ್ದರೂ, ಪಂದ್ಯದ ಬಳಿಕ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಮುಹಮ್ಮದ್ ರಿಝ್ವಾನ್ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪರಸ್ಪರ ಆಲಿಂಗಿಸಿರುವುದನ್ನು ಹಾಗೂ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಪಾಕಿಸ್ತಾನದ ಆಟಗಾರರೊಂದಿಗೆ ಸಂಭಾಷಣೆ ನಡೆಸಿರುವುದನ್ನು ಅವರು ಮೆಲುಕು ಹಾಕಿದ್ದಾರೆ.
‘‘ಕಳೆದ ಪಂದ್ಯವು ಒಳ್ಳೆಯ ರೀತಿಯಲ್ಲಿ ಸಾಗಿದೆ. ವಿರಾಟ್ ಕೊಹ್ಲಿ ಮತ್ತು ಧೋನಿ ನಮ್ಮ ಆಟಗಾರರನ್ನು ಆಲಿಂಗಿಸಿರುವುದು ವಿಶ್ವ ಕ್ರಿಕೆಟ್ಗೆ ಒಳ್ಳೆಯ ಸಂಗತಿಯಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯದ ಫಲಿತಾಂಶ ಏನಿದ್ದರೂ, ನನ್ನ ಪ್ರಕಾರ ಅಲ್ಲಿ ಮಾನವೀಯತೆ ಮತ್ತು ಪ್ರೀತಿ ಗೆದ್ದಿದೆ’’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಶ್ತಾಕ್ ಹೇಳಿದರು.