ಮಾನಹಾನಿ ಪ್ರಕರಣ: ಇಂದು ರಾಹುಲ್ ಖುದ್ದು ಹಾಜರಿಗೆ ನ್ಯಾಯಾಲಯ ಆದೇಶ

ಸೂರತ್, ಅ.29: ಮೋದಿ ಹೆಸರಿನ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೇಲೆ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿಯವರಿಗೆ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೇಶನ ನೀಡಿದೆ.
ಸೂರತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿಯವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಮತ್ತು 500ರ ಅನ್ವಯ 2019ರ ಎಪ್ರಿಲ್‌ನಲ್ಲಿ ರಾಹುಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು. 2019ರಲ್ಲಿ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡುವ ವೇಳೆ ಇಡೀ ಮೋದಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಪೂರ್ಣೇಶ್ ಆಪಾದಿಸಿದ್ದರು.
ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ 2019ರ ಎಪ್ರಿಲ್ 13ರಂದು ನಡೆದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ, "ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಹೇಗೆ ಮೋದಿ ಎಂಬ ಸಮಾನ ಸರ್‌ನೇಮ್ ಬಂದಿದೆ. ಎಲ್ಲ ಕಳ್ಳರಿಗೆ ಹೇಗೆ ಮೋದಿ ಎಂಬ ಸಮಾನ ಸರ್‌ನೇಮ್ ಬಂದಿದೆ" ಎಂದು ಹೇಳಿದ್ದಾಗಿ ವರದಿಯಾಗಿತ್ತು.
ಈ ವಾರದ ಆರಂಭದಲ್ಲಿ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಎ.ಎನ್.ದವೆ, ಶುಕ್ರವಾರ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಲು ಹಾಜರಾಗುವಂತೆ ಸೂಚಿಸಿದ್ದರು. ಈ ವರ್ಷದ ಜೂನ್ 24ರಂದು ರಾಹುಲ್ ಈ ಪ್ರಕರಣದಲ್ಲಿ ಹಾಜರಾಗಿದ್ದರು. ಅದಕ್ಕೂ ಮುನ್ನ 2019ರ ಅಕ್ಟೋಬರ್‌ನಲ್ಲಿ ನ್ಯಾಯಾಲಯದಲ್ಲಿ ಹಾಜರಾಗಿ ತಾವು ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು.