ಟಿಕ್ರಿ, ಗಾಝಿಪುರ ಗಡಿಗಳಿಂದ ಬ್ಯಾರಿಕೇಡ್ಗಳನ್ನು ತೆಗೆದು ಹಾಕಲಾರಂಭಿಸಿದ ದಿಲ್ಲಿ ಪೊಲೀಸರು

photo: New indian express
ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೋರಿ ಕಳೆದ ವರ್ಷ ನವೆಂಬರ್ನಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದ ಟಿಕ್ರಿ ಹಾಗೂ ಗಾಝಿಪುರ ಗಡಿಗಳಿಂದ ದಿಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ತೆಗೆದುಹಾಕಲು ಆರಂಭಿಸಿದ್ದಾರೆ.
ಗಾಝಿಪುರ ಗಡಿಯಿಂದ ಬ್ಯಾರಿಕೇಡ್ಗಳನ್ನು ತೆಗೆದುಹಾಕಿದ ನಂತರ ರಾಷ್ಟ್ರೀಯ ಹೆದ್ದಾರಿ 9 ಹಾಗೂ ರಾಷ್ಟ್ರೀಯ ಹೆದ್ದಾರಿ 24 ಅನ್ನು ತೆರೆಯಲಾಗುವುದು ಎಂದು ಉಪ ಪೊಲೀಸ್ ಆಯುಕ್ತೆ (ಪೂರ್ವ) ಪ್ರಿಯಾಂಕಾ ಕಶ್ಯಪ್ ಶುಕ್ರವಾರ ಹೇಳಿದ್ದಾರೆ.
"ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ" ಬ್ಯಾರಿಕೇಡ್ಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಗುರುವಾರ ದಿಲ್ಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಅವರು ಹೇಳಿದ್ದಾರೆ.
ಟಿಕ್ರಿ ಗಡಿಯಲ್ಲಿನ ಎಂಟು ಪದರಗಳ ಬ್ಯಾರಿಕೇಡ್ಗಳ ಪೈಕಿ ನಾಲ್ಕನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆದಾಗ್ಯೂ, ಸಿಮೆಂಟ್ ಬ್ಯಾರಿಕೇಡ್ಗಳು ಇನ್ನೂ ಸ್ಥಳದಲ್ಲಿವೆ ಮತ್ತು ಪ್ರಯಾಣಿಕರಿಗೆ ರಸ್ತೆಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿ ಹೇಳಿದರು.
ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಆದರೆ ರಸ್ತೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಅಕ್ಟೋಬರ್ 21 ರಂದು ಸುಪ್ರೀಂ ಕೋರ್ಟ್ ಹೇಳಿದ ಒಂದು ವಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ತಡೆಗೆ ಪೊಲೀಸರೇ ಹೊಣೆ ಎಂದು ರೈತರು ನ್ಯಾಯಾಲಯಕ್ಕೆ ತಿಳಿಸಿದ್ದರು.







