ರಾಷ್ಟ್ರೀಯ ಕಾನೂನು ವಿವಿಯಿಂದ ಪೌರ ಕಾರ್ಮಿಕರ ಸಮೀಕ್ಷೆ: ಎಂ. ಶಿವಣ್ಣ

ಮಂಗಳೂರು, ಅ.29: ರಾಜ್ಯವನ್ನು ಮ್ಯಾನುವೆಲ್ ಸ್ಕಾವೆಂಜರ್ಸ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ನಿಖರ ಮಾಹಿತಿಯನ್ನು ಪಡೆಯುವ ಸಲುವಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಿಂದ ಮಾಡಲಾಗುವುದು ಎಂದು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ತಿಳಿಸಿದ್ದಾರೆ.ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಮ್ಯಾನುವೆಲ್ ಸ್ಕಾವೆಂಜರ್ಸ್ ಕಾಯ್ದೆ 2013ರ ಕುರಿತು ತರಬೇತಿ ಹಾಗೂ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಹಾನಗರ ಪಾಲಿಕೆಗಳು, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ಬಗ್ಗೆ ಮಾಹಿತಿ ಇದೆಯಾದರೂ ಆಸ್ಪ್ರೆ, ಮಾಲ್, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವವರ ಬಗ್ಗೆ ಮಾಹಿತಿ ಇಲ್ಲವಾಗಿದೆ. ಇದಕ್ಕಾಗಿ ರಾಜ್ಯದಲ್ಲಿರುವ ಪೌರ ಕಾರ್ಮಿಕರ ಸಂಪೂರ್ಣ ಮಾಹಿತಿ, ಅಂಕಿ ಅಂಶಗಳನ್ನು ಕಲೆ ಹಾಕಲು ಆಯೋಗ ನಿರ್ಧರಿಸಿದೆ. ಈ ಬಗ್ಗೆ ಪ್ರಥಮ ಹಂತದಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಮೈಸೂರು, ಬಾಗಲಕೋಟೆ ಮತ್ತು ಬಳ್ಳಾರಿಯನ್ನು ಆಯ್ದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಆಯೋಗದ ಕಾರ್ಯದರ್ಶಿಯವರು ಇಂದು ಬೆಳಗ್ಗೆ ನಗರದ ಕೆಲವು ಕಡೆ ಸುತ್ತಾಟ ನಡೆಸಿದ ವೇಳೆ ಪೌರ ಕಾರ್ಮಿಕರಿಗೆ ಕೆಲಸ ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರಿಂದ ಸೂಕ್ತವಾದ ಮಾಸ್ಕ್, ಗ್ಲೌಸ್ ಹಾಗೂ ಅಗತ್ಯ ಪರಿಕರಗಳನ್ನು ನೀಡದಿರುವ ಬಗ್ಗೆ ಗಮನಕ್ಕೆ ಬಂದಿದೆ. ಮಂಗಳೂರಿನಂತಹ ನಗರದಲ್ಲಿ ಈ ರೀತಿಯ ಪರಿಸ್ಥಿತಿ ಬೇಸರ ತಂದಿದೆ. ಪ್ರತಿಯೊಬ್ಬ ಪೌರ ಕಾರ್ಮಿಕರಿಗೂ ವ್ಯವಸ್ಥಿತವಾಗಿ ಸುರಕ್ಷಿತ ಪರಿಕರ ಕಿಟ್ ವಿತರಿಸುವಂತೆ ನಿರ್ದೇಶಿಸಲಾಗಿದೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ಪಿಎಪ್, ಇಎಸ್‌ಐ ಪಾವತಿ ಮಾಡದಿರುವ ಬಗ್ಗೆ ಕಾರ್ಮಿಕರಿಂದಲೇ ದೂರು ಬಂದಿದೆ. ಬಿಬಿಎಂಪಿಯಲ್ಲಿ 540 ಕೋಟಿ ರೂ.ಗಳ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಇಲ್ಲಿ ಅಂತಹ ಹಗರಣ ಆಗದಿರುವುದನ್ನು ಖಾತರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಗಳು ಇಲ್ಲದಿರುವುದು ಕಂಡು ಬಂದ್ದಿದ್ದು, ಸೂಕ್ತ ಸೌಲಭ್ಯವನ್ನು ಜಿಲ್ಲಾಡಳಿತವು ಆರು ತಿಂಗಳ ಒಳಗೆ ಮಸ್ಟರಿಂಗ್ ಪಾಯಿಂಟ್‌ಗಳಲ್ಲಿ ಒದಗಿಸುವಂತೆ ಸೂಚಿಸಲಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ವೇತನ, ಪಿಎಫ್, ಇಎಸ್‌ಐ ಪಾವತಿಸದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಪ್ರತಿ ವಾರಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಆಯೋಗಕ್ಕೆ ವರದಿ ನೀಡಲು ತಿಳಿಸಲಾಗಿದೆ ಎಂದು ಅವರು ಹೇಳಿದರು.
ಪೌರ ಕಾರ್ಮಿಕರಿಗೆ ಸಂಬಂಧಿಸಿ ರಾಜ್ಯಾದ್ಯಂತ ಗುತ್ತಿಗೆ ಪದ್ಧತಿ ರದ್ದುಗೊಳಿಸಿದ್ದರೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅದು ಜೀವಂತವಾಗಿರುತ್ತದೆ. ಹಲವು ಬಾರಿ ಸಂವಾದಗಳಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಈ ಪದ್ಧತಿಯನ್ನು ರದ್ದುಗೊಳಿಸಿ ಕಡ್ಡಾಯವಾಗಿ ಪೌರ ಕಾರ್ಮಿಕರನ್ನು ನೇರ ಪಾವತಿಯಡಿ ಪರಿಗಣಿಸುವಂತೆ ನಿರ್ದೇಶಿಸಲಾಗಿದೆ. ಮಾತ್ರವಲ್ಲದೆ ಪೌರ ಕಾರ್ಮಿಕರಿಗೆ ನೀಡಲಾಗುವ ವೇತನದ ಮಾಹಿತಿಯನ್ನು ಒಳಗೊಂಡ ಪೇ ಸ್ಲಿಪ್ ಕೂಡಾ ಕಡ್ಡಾಯವಾಗಿ ನೀಡುವಂತೆ ಸೂಚಿಸಲಾಗಿದೆ ಎಂದರು.ಪೌರ ಕಾರ್ಮಿಕರ ಹಕ್ಕು, ಸೌಲಭ್ಯಗಳ ಬಗ್ಗೆ ಅರಿವು ಇಲ್ಲವಾಗಿದ್ದು, ಈ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜಾಗನತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತಿ ಜಿಲ್ಲೆಗೂ 1 ಲಕ್ಷ ರೂ. ನೀಡಲಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಆಯೋಗದ ಕಾರ್ಯದರ್ಶಿ ರಮಾ, ನಗರಾಭಿವೃದ್ಧಿ ಕೋಶದ ಉಪ ನಿರ್ದೇಶಕಿ ಗಾಯತ್ರಿ ಮೊದಲಾದವರು ಉಪಸ್ಥಿತರಿದ್ದರು.
ಪೌರ ಕಾರ್ಮಿಕರಿಗೆ ಹಾಲು, ಮೊಟ್ಟೆ ಶೀಘ್ರ ಜಾರಿ
ಪೌರ ಕಾರ್ಮಿಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡುವಂತೆ ಶಿಫಾರಸ್ಸು ಮಾಡಲಾಗಿದ್ದು, ಬಿಬಿಎಂಪಿಯಲ್ಲಿ ಈಗಾಗಲೇ ಗರಿಷ್ಠ ವಯೋಮಿತಿಯನ್ನು 45ರಿಂದ 50 ವರ್ಷಗಳಿಗೆ ಏರಿಕೆ ಮಾಡಲಾಗಿದೆ. ಇದನ್ನು ಇತರ ಕಡೆಗೂ ಅನ್ವಯಿಸಲಾಗುವುದು. ಇದೇ ವೇಳೆ ಪೌರ ಕಾರ್ಮಿಕರಿಗೆ ಪೌಷ್ಠಿಕ ಆಹಾರದ ಕೊರತೆಯ ಹಿನ್ನೆಲೆಯಲ್ಲಿ ಹಾಲು, ಮೊಟ್ಟೆ ಒದಗಿಸುವ ಆಯೋಗದ ಶಿಫಾರಸ್ಸಿಗೆ ಸರಕಾರದಿಂದ ಅನುಮತಿ ದೊರಕಿದ್ದು, ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ಸಫಾಯಿ ಕರ್ಮಚಾರಿ ಆಯೊೀಗದ ಅಧ್ಯಕ್ಷ ಎಂ ಶಿವಣ್ಣ ತಿಳಿಸಿದ್ದಾರೆ







