ಪುನೀತ್ ರಾಜ್‍ಕುಮಾರ್ ನಿಧನ: ಬೆಂಗಳೂರಿನಲ್ಲಿ ಶಾಲೆ-ಕಾಲೇಜುಗಳಿಗೆ ರಜೆ, ಬಿಕೋ ಎನ್ನುತ್ತಿರುವ ರಸ್ತೆಗಳು

ಬೆಂಗಳೂರು, ಅ. 29: ಚಿತ್ರನಟ ಪುನೀತ್ ರಾಜ್‍ಕುಮಾರ್ ಹೃದಯಾಘಾತದಿಂದ ಏಕಾಏಕಿ ನಿಧನರಾದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ನಗರದ ಬಹುತೇಕ ಶಾಲೆ-ಕಾಲೇಜುಗಳು ರಜೆ ನೀಡಲಾಯಿತು. ಅಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿನ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದೆ.
ಕೆಲವು ಕಡೆಗಳಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಅಚ್ಚುಮೆಚ್ಚಿನ ನಟನಿಗೆ ಸಂತಾಪ ಸೂಚಿಸಿದರು. ಈ ಮಧ್ಯೆ ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆದು ಅಭಿಮಾನಿಗಳ ದುಃಖದ ಕಟ್ಟೆ ಹೊಡೆದಿತ್ತು. ಅಪ್ಪು ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಆಸ್ಪತ್ರೆಗೆ ಧಾವಿಸಿ ಬಂದ ಅಭಿಮಾನಿಗಳು ಕಣ್ಣೀರಾದರು.
ನಟ ಪುನೀತ್ ಅವರನ್ನು ನೆನೆದು ತೀವ್ರ ದುಃಖ ವ್ಯಕ್ತಪಡಿಸಿದರು. ಅಲ್ಲದೆ, ಕೆಲ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಲವರು ಎದೆಬಡಿದುಕೊಂಡು ಕಣ್ಣೀರಿಟ್ಟರು. ಎಲ್ಲರಲ್ಲಿಯೂ ಏನೋ ಆತಂಕ, ದುಗುಡ ಮನೆ ಮಾಡಿತ್ತು. ಆಸ್ಪತ್ರೆ, ಸದಾಶಿವನಗರದ ಅವರ ನಿವಾಸ ಹಾಗೂ ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳ ದಂಡು ನೆರೆದಿತ್ತು.
ಅನುರುಣಿಸಿದ ನೀನೇ ರಾಜಕುಮಾರ..: ಅಪ್ಪು ನಿಧನದ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಮೊಬೈಲ್, ವಾಟ್ಸ್‍ಆಪ್, ಟ್ವಟ್ಟರ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣ ‘ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ ನೀನೆ ರಾಜಕುಮಾರ..!' ಹಾಡು ಎಲ್ಲೆಡೆ ಅನುರುಣಿಸಿತು. ಮಧ್ಯಾಹ್ನದಿಂದಲೇ ಬೆಂಗಳೂರು ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಮೇಲ್ಸೇತುವೆಗಳು ಖಾಲಿ ಖಾಲಿಯಾಗಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.






.jpg)
.jpg)
.jpg)
.jpg)

