ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಪ್ರಮುಖ ಆರೋಪಿ ರಾಜೇಶ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮಂಗಳೂರು, ಅ.29: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಪ್ರಮುಖ ಆರೋಪಿ ಕೆ.ಎಸ್.ಎನ್.ರಾಜೇಶ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ 6ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಇದೇ ಪ್ರಕರಣದಲ್ಲಿ ಬಂಧಿತ ಧ್ರುವ ಹೆಗ್ಡೆ, ಮಹಾಲಕ್ಷ್ಮೀ ಹೆಗ್ಡೆ, ಶಿವಾನಂದ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ರಾಜೇಶ್ ಭಟ್‌ಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದಾರೆನ್ನಲಾದ ಬೊಂದೇಲ್‌ನ ಅನಂತ ಭಟ್ ಗುರುವಾರವೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವಕೀಲ ರಾಜೇಶ್ ಭಟ್ ವಿರುದ್ಧ ಅ.18ರಂದು ಮಹಿಳಾ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಆ ಬಳಿಕ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸಿದ್ದ. ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಎರಡು ಬಾರಿ ಮುಂದೂಡಿದ್ದು, ಮೂರನೇ ಬಾರಿ ತಿರಸ್ಕೃತಗೊಳಿಸಿದೆ. ಪ್ರಕರಣವನ್ನು ಮಾತುಕತೆ ನಡೆಸಿ ಮುಚ್ಚಿ ಹಾಕಲು ಯತ್ನಿಸಿದ್ದಾರೆನ್ನಲಾಧ ಉರ್ವ ಠಾಣೆಯ ಮಹಿಳಾ ಪಿಎಸ್‌ಐ ಸಹಿತ ಇಬ್ಬರು ಪೊಲೀಸರು ಅಮಾನತುಗೊಂಡಿದ್ದರು. ಇನ್‌ಸ್ಪೆಕ್ಟರ್ ಭಾರತಿ ಅವರಿಗೆ ಪೊಲೀಸ್ ಆಯುಕ್ತರು ನೊಟೀಸು ಜಾರಿ ಮಾಡಿದ್ದರು.
ಮಂಗಳೂರಿನಲ್ಲಿ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರುವ 20 ವರ್ಷದ ಸಂತ್ರಸ್ತೆಯು ಆಗಸ್ಟ್ 8ರಂದು ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್‌ರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದರು. ಸೆ.25ರಂದು 6:40ಕ್ಕೆ ತನ್ನ ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿದ್ದು, ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ ಎಂದು ಆರೋಪಿಸಿ ಯುವತಿ ದೂರು ದಾಖಲಿಸಿದ್ದರು.







