ಗೋವಾ:ಮೀನು ಮಾರುಕಟ್ಟೆಗೆ ತೆರಳಿ ಮೀನುಗಾರರ ಸಮಸ್ಯೆ ಆಲಿಸಿದ ಮಮತಾ ಬ್ಯಾನರ್ಜಿ
"ಖೇಲಾ ಹೋಬ್" ಘೋಷಣೆಗಳ ನಡುವೆ 2 ಕೆಜಿ ಮೀನು ಖರೀದಿಸಿದ ಬಂಗಾಳದ ಸಿಎಂ

ಪಣಜಿ (ಗೋವಾ): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಲು ಶುಕ್ರವಾರ ಸ್ಥಳೀಯ ಮೀನು ಮಾರುಕಟ್ಟೆಗೆ ಆಗಮಿಸಿದರು. ಬಂಗಾಳದ ಚುನಾವಣೆ ವೇಳೆ ಚುನಾವಣಾ ಘೋಷಣೆಯಾಗಿದ್ದ "ಖೇಲಾ ಹೋಬ್" ಹಾಗೂ "ದೀದಿ, ದೀದಿ" ಎಂಬ ಘೋಷಣೆಗಳು ಮಾರುಕಟ್ಟೆಯಲ್ಲಿ ಮೊಳಗಿದವು. ಮಮತಾ ಅವರು ರೂ. 1,000 ನೀಡಿ ಎರಡು ಕಿಲೋಗ್ರಾಂ ಮೀನು ಖರೀದಿಸಿದರು.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಅವರು ಬೆಟಿನ್‌ನ ಮಾಲಿಮ್ ಜೆಟ್ಟಿಯಲ್ಲಿ ಮೀನುಗಾರ ಸಮುದಾಯದೊಂದಿಗೆ ಸಂವಾದ ನಡೆಸಿದರು ಹಾಗೂ ಅವರ ಕುಂದುಕೊರತೆಗಳನ್ನು ಆಲಿಸಿದ ನಂತರ ಕಲ್ಯಾಣ ಕ್ರಮಗಳನ್ನು ಘೋಷಿಸಿದರು ಎಂದು ತೃಣಮೂಲ ಕಾಂಗ್ರೆಸ್‌ನ ಗೋವಾ ಘಟಕ ಹೇಳಿಕೆಯೊಂದರಲ್ಲಿ ತಿಳಿಸಿದೆ.
"ಗೋವಾ ಟಿಎಂಸಿ ಮೀನುಗಾರ ಸಮುದಾಯದ ಜೀವನ ಮತ್ತು ಜೀವನೋಪಾಯವನ್ನು ರಕ್ಷಿಸುತ್ತದೆ" ಎಂದು ಬ್ಯಾನರ್ಜಿ ಮಾರುಕಟ್ಟೆಯಲ್ಲಿ ನೆರೆದಿದ್ದ ಅಪಾರ ಜನಸಮೂಹಕ್ಕೆ ಭರವಸೆ ನೀಡಿದರು ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಮಾಸಿಕ ರೂ. 4,000 ಭತ್ಯೆ ನೀಡುವುದಾಗಿ ಅವರು ಘೋಷಿಸಿದರು ಮತ್ತು ಮೀನುಗಾರಿಕೆ ಬಲೆಗಳು ಮತ್ತು ಪರಿಕರಗಳ ಖರೀದಿ ಮತ್ತು ದುರಸ್ತಿಗೆ ಸಹಾಯಧನವನ್ನು ಪರಿಚಯಿಸಲಾಗುವುದು ಎಂದು ಹೇಳಿದರು.