ಪುನೀತ್ ರಾಜ್‍ಕುಮಾರ್ ಶಿವಮೊಗ್ಗ ನಂಟು; ಡಾಕ್ಯೂಮೆಂಟರಿಗಾಗಿ ಸಕ್ರೆಬೈಲಿಗೆ ಕೊನೆಯ ಭೇಟಿ
ಗಾಜನೂರು ಡ್ಯಾಮ್ ಗೂ ಭೇಟಿ ನೀಡಿದ್ದ ನಟ

ಶಿವಮೊಗ್ಗ, ಅ.29: ಹೃದಯಾಘಾತದಿಂದ ನಿಧನರಾಗಿರುವ ಕನ್ನಡದ ಖ್ಯಾತ ನಟ, ಪುನೀತ್ ರಾಜ್ ಕುಮಾರ್ ಅವರು ಶಿವಮೊಗ್ಗದೊಂದಿಗೆ ನಂಟು ಹೊಂದಿದ್ದು, ಅವರು ನಟನೆಯ ಹಲವು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.
ಅವರು ನಟಿಸಿರುವ `ಹುಡುಗರು' ಚಲನಚಿತ್ರದಲ್ಲಿ ಕಂಡು ಬರುವ ಕೆಲವೊಂದು ದೃಶ್ಯಗಳು ನೊಣಬೂರಿನಲ್ಲಿ ಚಿತ್ರೀಕರಿಸಲಾಗಿದೆ. ಅದೇ ರೀತಿ, `ಪರಮಾತ್ಮ' ಚಿತ್ರವನ್ನು ನಗರ, ಹೊಸನಗರ, ಬಿದನೂರಿನಲ್ಲಿ ಶೂಟಿಂಗ್ ಮಾಡಲಾಗಿದೆ. ಯುವರತ್ನ ಚಿತ್ರದಲ್ಲೂ ಕಂಡುಬರುವ ಕೆಲವು ದೃಶ್ಯಗಳು ಸಹ್ಯಾದ್ರಿ ಕಾಲೇಜಿನಲ್ಲಿ ಚಿತ್ರೀಕರಿಸಲಾಗಿದೆ.
ಸಕ್ರೆಬೈಲಿಗೆ ಅಂತಿಮ ಭೇಟಿ: ಅರಣ್ಯ ಇಲಾಖೆಯ ಡಾಕ್ಯೂಮೆಂಟರಿಯೊಂದನ್ನು ಚಿತ್ರೀಕರಿಸುವುದಕ್ಕಾಗಿ ತಂಡದೊಂದಿಗೆ ಸೆ.1ರಂದು ಪುನೀತ್ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಇದೇ ಇವರು ಕೊನೆಯ ಭೇಟಿಯಾಗಿದೆ. ಆಗ ಸಕ್ರೆಬೈಲಿನ ಕ್ರಾಲ್ ಬಳಿ ಆನೆಗಳೊಂದಿಗೆ ಅತ್ಯಂತ ಆಪ್ತ ಸಮಯವನ್ನು ಇವರು ಕಳೆದಿದ್ದರು. ಅಭಿಮಾನಿಗಳ ಒತ್ತಾಯದ ಮೇರೆಗೆ ಕ್ರಾಲ್‍ನ ಗೇಟ್‍ವರೆಗೆ ಬಂದಿದ್ದ ಅವರು ಕೋವಿಡ್ ಕಾರಣದಿಂದಾಗಿ ಸಾಮಾಜಿಕ ಅಂತರದಲ್ಲಿಯೇ ಅಭಿಮಾನಿಗಳ ಕಡೆಗೆ ಕೈಬಿಸಿ ತೆರಳಿದ್ದರು.
ಕ್ರಾಲ್ ಜಾಗದಲ್ಲಿ ಚಿತ್ರೀಕರಣ ಮುಗಿದ ನಂತರ ಪುನೀತ್ ಅವರು ಗಾಜನೂರು ಜಲಾಶಯಕ್ಕೂ ಭೇಟಿ ನೀಡಿದ್ದರು. ಪ್ರಕೃತಿಯ ಸೌಂದರ್ಯವನ್ನು ಸವಿದಿದ್ದರು. ಇದೊಂದು ಅವಿಸ್ಮರಣೀಯ ಗಳಿಗೆಯಾಗಿತ್ತು. ಡಾ.ರಾಜ್‍ಕುಮಾರ್ ಅವರ ನಟನೆಯ ಆಕಸ್ಮಿಕ ಚಿತ್ರೀಕರಣದ ವೇಳೆಯೂ ಪುನೀತ್ ಅವರು ಅರಸಾಳು, ಕೊಡಚಾದ್ರಿಗೂ ಭೇಟಿ ನೀಡಿದ್ದರು.







