ಚಿಕ್ಕಮಗಳೂರಿನ ಅಳಿಯ ಪುನೀತ್ ರಾಜ್ಕುಮಾರ್ ನಿಧನಕ್ಕೆ ಕಾಫಿನಾಡು ಕಂಬನಿ
ನಟನ ಕಾಫಿನಾಡಿನ ನಂಟು

ಪುನೀತ್ ರಾಜ್ಕುಮಾರ್ ಪತ್ನಿ ಅಶ್ನಿನಿ ಅವರ ನಿವಾಸ
ಚಿಕ್ಕಮಗಳೂರು, ಅ.29: ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತಿಗೆ ಪಾತ್ರರಾಗಿರುವ, ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್ಕುಮಾರ್ ಶುಕ್ರವಾರ ಹೃದಯಾಘಾತದಿಂದ ನಿಧನರಾದ ಸುದ್ದಿಗೆ ಇಡೀ ಕಾಫಿನಾಡು ಮಮ್ಮುಲ ಮರುಗಿದೆ. ವಿವಿಧ ಸಂಘ ಸಂಸ್ಥೆಗಳು ಅಗಲಿದ ಖ್ಯಾತ ನಟ ಹೃದಯವಂತಿಕೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಸಭೆಗಳ ಮೂಲಕ ಕಂಬನಿ ಮಿಡಿಡಿವೆ.
ಅಷ್ಟಕ್ಕೂ ಕಾಫಿನಾಡಿನ ಜನರು ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಈ ಪರಿಯಲ್ಲಿ ಕಂಬನಿ ಮಿಡಿದಿರುವುದಕ್ಕೂ ಕಾರಣವಿದೆ. ನಟ ಪುನೀತ್ ರಾಜ್ಕುಮಾರ್ ಹಾಗೂ ಕಾಫಿನಾಡಿಗೆ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜ್ಕುಮಾರ್ ಕಾಫಿನಾಡಿನಲ್ಲಿ ಹುಟ್ಟದಿದ್ದರೂ ಅವರು ಕಾಫಿನಾಡಿನ ಅಳಿಯರಾಗಿದ್ದರು ಎಂಬ ವಿಷಯ ರಾಜ್ಯದ ಬೇರೆ ಜಿಲ್ಲೆಗಳ ಜನರಿಗಿರಲಿ ಕಾಫಿನಾಡಿನ ಎಷ್ಟೋ ಜನರಿಗೆ ತಿಳಿದಿಲ್ಲ. ಪುನೀತ್ ರಾಜ್ಕುಮಾರ್ ಪತ್ನಿ ಅಶ್ನಿನಿ ಅವರು ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಚಿಕ್ಕಮಗಳೂರು ತಾಲೂಕಿನ ಬಾಗೇಮನೆ ಎಸ್ಟೇಟ್ ಮಾಲಕ ಹಾಗೂ ನಗರದ ಐಜಿ ರಸ್ತೆಯಲ್ಲಿರುವ ನಾಗಲಕ್ಷ್ಕೀ ಚಿತ್ರಮಂದಿರದ ಮಾಲಕರ ಮಗಳನ್ನೇ ನಟ ಪುನೀತ್ ವಿವಾಹವಾಗಿದ್ದ ಕಾರಣದಿಂದ ಚಿಕ್ಕಮಗಳೂರು ಜಿಲ್ಲೆಯ ಅಳಿಯನ ಅಕಾಲಿಕ ನಿಧನಕ್ಕೆ ಜನರು ಮಮ್ಮುಲ ಮರುಗಿದ್ದಾರೆ.
ಶುಕ್ರವಾರ ಬೆಳಗ್ಗೆ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಘಾತವಾಗಿ ಆಸ್ಪತೆಗೆ ಸೇರಿದ್ದಾರೆ ಎಂಬ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ದೇವಾಲಯಗಳಲ್ಲಿ ದೇವರ ಮೋರೆ ಹೋಗಿದ್ದರು. ಆದರೆ ಅಭಿಮಾನಿಗಳ ಪ್ರಾರ್ಥನೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದು, ಕಾಫಿ ನಾಡಿನಾದ್ಯಂತ ದುಃಖ ಮಡುಗಟ್ಟಿದೆ.
ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಕಾಫಿನಾಡಿನೊಂದಿಗೆ ಅಪಾರವಾದ ನಂಟು ಹೊಂದಿದ್ದು, ಅವರ ಅನೇಕ ಚಲನಚಿತ್ರಗಳಿಗೆ ಕಾಫಿನಾಡು ಸಾಕ್ಷಿಯಾಗಿದೆ. ಅಭಿ, ಅಪ್ಪು, ಮಿಲನ, ಬೆಟ್ಟದಹೂವು (ಕೆಮ್ಮಣ್ಣಗುಂಡಿಸಮೀಪ) ಸೇರಿದಂತೆ 15ಕ್ಕೂ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ಚಿಕ್ಕಮಗಳೂರು ಜಿಲ್ಲೆಯಲ್ಲೇ ನಡೆದಿದೆ. ಸಿನೆಮಾ ನಂಟು ಮಾತ್ರವಲ್ಲದೇ ಜಿಲ್ಲೆಯೊಂದಿಗೆ ಕೌಟುಂಬಿಕ ನಂಟು ಹೊಂದುವ ಮೂಲಕ ಕಾಫಿನಾಡಿನ ಅಳಿಯನಾಗಿರುವ ಕಾರಣಕ್ಕೆ ಪುನೀತ್ ರಾಜ್ಕುಮಾರ್ ಕಾಫಿನಾಡಿನ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದರು.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಬಾಗೇಮನೆ ಬಿ.ರೇವನಾಥ್ ಮತ್ತು ವಿಜಯಾ ರೇವನಾಥ್ ದಂಪತಿ ಪುತ್ರಿ ಅಶ್ವಿನಿಯವರೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಡುವ ಮೂಲಕ ಪುನೀತ್ ರಾಜ್ಕುಮಾರ್ ಕಾಫಿನಾಡಿನ ಅಳಿಯನಾದರು. 40 ವರ್ಷಗಳಿಂದ ಬಿ.ರೇವನಾಥ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಬಾಗೇಮನೆಯಲ್ಲಿ ಬಿ.ರೇವನಾಥ್ ಅವರಿಗೆ ಸೇರಿದ ಮನೆ ಇದೆ, ಅಲ್ಲಿಗೆ ಅನೇಕ ಬಾರಿ ಪುನೀತ್ ರಾಜ್ಕುಮಾರ್ ಹಾಗೂ ಪತ್ನಿ ಅಶ್ವಿನಿ, ಮಕ್ಕಳು ಬಂದು ತಂಗಿದ್ದರು. ಸದ್ಯ ಪುನೀತ್ ನಿಧನದ ಸುದ್ದಿ ಬಾಗೇಮನೆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.
ರೇವನಾಥ್ ಮತ್ತ ವಿಜಯಾ ದಂಪತಿ ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಮಗಳು ಅಶ್ವಿನಿ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರು. ಬೆಂಗಳೂರಿನಲ್ಲಿ ಸಿನೆಮಾ ವಿತರಕರಾಗಿದ್ದ ರೇವನಾಥ್ ಅವರಿಗೆ ಡಾ.ರಾಜ್ಕುಟುಂಬದ ಪರಿಚಯವಿದ್ದ ಹಿನ್ನೆಲೆಯಲ್ಲಿ ರೇವನಾಥ್ ಮಗಳು ಅಶ್ವಿನಿ ಹಾಗೂ ಪುನೀತ್ಗೆ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಈ ಪ್ರೀತಿಗೆ ಡಾ.ರಾಜ್ಕುಮಾರ್ ಕುಟುಂಬದ ಒಪ್ಪಿಗೆಯ ಮುದ್ರೆ ಸಿಕ್ಕಿದ್ದರಿಂದ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಎಂದು ಚಿಕ್ಕಮಗಳೂರು ನಗರದಲ್ಲಿ ನೆಲೆಸಿರುವ ಅಶ್ವಿನಿ ಅವರ ಸಂಬಂಧಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಐ.ಬಿ.ಶಂಕರ್ ಮತ್ತು ಉಮಾ ಶಂಕರ್ ದಂಪತಿ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.
"ನಮ್ಮ ಕುಟುಂಬದೊಂದಿಗೆ ಪುನೀತ್ ಒಡನಾಟ ಹೊಂದಿದ್ದರು. ಪುನೀತ್ ಪತ್ನಿ ಅಶ್ವಿನಿ ಮತ್ತು ನನ್ನ ಮಗಳು ಗೌರವಿ ಶಂಕರ್ ಒಟ್ಟಿಗೆ ಆಡಿ ಬೆಳೆದವರು. ಪುನೀತ್ ರಾಜ್ಕುಮಾರ್ ಅವರು ಸಿನೆಮಾ ಚಿತ್ರೀಕರಣ ಹಾಗೂ ಇತರ ಸಂದರ್ಭಗಳಲ್ಲಿ ಚಿಕ್ಕಮಗಳೂರಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದರು. ನಮ್ಮ ಮನೆಯವರನ್ನು ಪುನೀತ್ ಮನೆಯವರಂತೆ ಪ್ರೀತಿಸುತ್ತಿದ್ದರು ಎಂದು ಪುನೀತ್ ಪತ್ನಿ ಅಶ್ನಿನಿ ಅವರ ಸೋದರ ಸಂಬಂಧಿ ಐ.ಬಿ.ಶಂಕರ್ ಎಂದು ಭಾವುಕರಾಗಿ ಮಾತನಾಡಿದರು.
ಇತ್ತೀಚೆಗೆ ಪುನೀತ್ ಮಗಳು ಅಮೇರಿಕಾಕ್ಕೆ ಹೋಗುವಾಗ ನಮ್ಮನೆಲ್ಲ ಊಟಕ್ಕೆ ಕರೆದಿದ್ದರು. ನಾವೆಲ್ಲ ಪುನೀತ್ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಿದ್ದೆವು. ಅದೇ ಕೊನೆಯದಾಗಿ ಅವರನ್ನು ನೋಡಿದ್ದು ಎಂದು ಅಂದಿನ ಕ್ಷಣವನ್ನು ಐಬಿ ಶಂಕರ್ ಮೆಲುಕು ಹಾಕಿದರು. ಇತ್ತೀಚೆಗೆ ಬೆಂಗಳೂರಿಗೆ ಹೋದಾಗ ನಮ್ಮ ಕಾರಿನ ಡ್ರೈವರ್ ಅಪ್ಪು ಜೊತೆ ಫೋಟೋ ತೆಗೆಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದ ಆದರೆ, ಸಾಧ್ಯವಾಗಿರಲಿಲ್ಲ ಈ ವಿಚಾರವನ್ನು ಅಪ್ಪುಗೆ ತಿಳಿಸಿದಾಗ ತುಂಬಾ ಬೇಸರಪಟ್ಟುಕೊಂಡಿದ್ದ ಎಂದು ಐಬಿ ಶಂಕರ್ ಪತ್ನಿ ಉಮಾಶಂಕರ್ ದುಃಖಿತರಾದರು. .
ಅಪ್ಪುಗೆ ಮಲೆನಾಡಿನ ಪರಿಸರ, ಮೀನು ಸಾರು ಅಂದ್ರೇ ಬಾರೀ ಇಷ್ಟ: ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ನೋಡಲು ಅನೇಕ ಬಾರಿ ಚಿಕ್ಕಮಗಳೂರಿಗೆ ಪುನೀತ್ ದಂಪತಿ ಬರುತ್ತಿದ್ದರು. ಮುಳ್ಳಯ್ಯನಗಿರಿ ಸೇರಿದಂತೆ ಮೂಡಿಗೆರೆ, ಕೊಟ್ಟಿಗೆಹಾರ ಹೀಗೆ ಅನೇಕ ಕಡೆ ಬಹಳಷ್ಟು ಬಾರಿ ಬಂದಿದ್ದರು. ಇಲ್ಲಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಚಿಕ್ಕಮಗಳೂರಿಗೆ ಬಂದಾಗಲೆಲ್ಲ ಹೆಚ್ಚಾಗಿ ಸರಾಯ್ ಹೋಟೆಲ್, ತ್ರಿವಿಕ್, ಕ್ರೀಮ್ ರೋಸ್ ಹೊಟೇಲ್ಗಳಲ್ಲಿ ತಂಗುತ್ತಿದ್ದರು. ಮಲೆನಾಡಿನ ಅಕ್ಕಿರೊಟ್ಟಿ ಮೀನ್ಸಾರು, ಮಟನ್ಚಾಪ್ಸ್ ನಾನ್ವೆಜ್ ಎಂಜಾಯ್ ಮಾಡುತ್ತಿದ್ದರು ಎಂದು ಐ.ಬಿ.ಶಂಕರ್ ಹೇಳಿದರು.
ಬೆಟ್ಟದ ಹೂವು ವಾರ್ಷಿಕ ಸಂಭ್ರಮಕ್ಕೆ ಪುನೀತ್ ಬಂದಿದ್ದರು: ಪುನೀತ್ ರಾಜ್ಕುಮಾರ್ ಬಾಲನಟನಾಗಿ ಅಭಿನಯಿಸಿದ್ದ ಬೆಟ್ಟದ ಹೂವು ಚಲನಚಿತ್ರ ಬಹುತೇಕ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಕೆಮ್ಮಣ್ಣಗುಂಡಿ ಸುತ್ತಮುತ್ತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ಈ ಚಿತ್ರಕ್ಕೆ ವಾರ್ಷಿಕ ಸಂಭ್ರಮ ಹಿನ್ನೆಲೆಯಲ್ಲಿ ಅಂದು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಿದ ಜಾಗಗಳಿಗೆ, ಮನೆಗೆ ಭೇಟಿ ನೀಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆ ವಿಡಿಯೋ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಿನ ಪರಿಸರ ಹಾಗೂ ಇಂದಿನ ಬದಲಾದ ಪರಿಸರವನ್ನು ನೋಡಿ ಪುನೀತ್ ಎಂಜಾಯ್ ಮಾಡಿದ್ದರು.
ರಾಜಕುಮಾರ ಚಿತ್ರ ಪ್ರಮೋಷನ್ಗೂ: ಪುನೀತ್ ರಾಜ್ಕುಮಾರ್ ಅವರ ಅಭಿನಯದ ಚಿತ್ರ ರಾಜಕುಮಾರ ಚಿತ್ರ 100 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ 2017 ಮೇ 13ರಂದು ಚಿಕ್ಕಮಗಳೂರು ನಗರದ ಮಿಲನ ಚಿತ್ರ ಮಂದಿರಕ್ಕೆ ಆಗಮಿಸಿ ಚಿತ್ರದ ಪ್ರಮೋಷನ್ ಮಾಡಿದ್ದರು. ಈ ಸಂದರ್ಭದಲ್ಲಿ ಚಿತ್ರ ಮಂದಿರದ ಬಾಲ್ಕನಿಯಲ್ಲಿ ನಿಂತು "ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳಿ ಹೋಗದು" ಹಾಡು ಹೇಳಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದ್ದರು.







