ಗುರುಗ್ರಹದ ಬೃಹತ್ ಕೆಂಪುಕುಳಿಯ ಬಗ್ಗೆ ಅಚ್ಚರಿಯ ಮಾಹಿತಿ ಲಭ್ಯ: ನಾಸಾ ವಿಜ್ಞಾನಿಗಳ ವರದಿ

ವಾಷಿಂಗ್ಟನ್, ಅ.29: ಗುರುಗ್ರಹದಲ್ಲಿನ ಕಠಿಣ ಪರಿಸರ, ಅಲ್ಲಿರುವ ಬೃಹತ್ ಕೆಂಪುಕುಳಿ ಮುಂತಾದ ಅಚ್ಚರಿಗಳ ಬಗ್ಗೆ ಬೆಳಕು ಚೆಲ್ಲಲು ಪೂರಕವಾದ ಮತ್ತಷ್ಟು ಮಾಹಿತಿಗಳನ್ನು ನಾಸಾದ ಜುನೊ ಬಾಹ್ಯಾಕಾಶ ನೌಕೆ ರವಾನಿಸಿದ್ದು ಇಲ್ಲಿ ಸುಳಿಸುತ್ತುವ ಅಗಾಧ ವೇಗದ ಚಂಡಮಾರುತ ನಿರೀಕ್ಷೆ ಮೀರಿ ಕೆಳಹಂತಕ್ಕೆ ವ್ಯಾಪಿಸುವ ಬಗ್ಗೆ ಮಾಹಿತಿ ದೊರಕಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಗುರುಗ್ರಹದಲ್ಲಿರುವ ಮೋಡಗಳ ಸುಮಾರು 350ರಿಂದ 500 ಕಿ.ಮೀ ಕೆಳಭಾಗದಲ್ಲಿ ಬೃಹತ್ ಕೆಂಪುಕುಳಿ ಅಸ್ತಿತ್ವದಲ್ಲಿರುವುದನ್ನು ಸೂಕ್ಷ್ಮತರಂಗ ಹಾಗೂ ಗುರುತ್ವಾಕರ್ಷಣೆಯ ಲೆಕ್ಕಾಚಾರದ ಆಧಾರದಲ್ಲಿ ದೃಢಪಡಿಸಲಾಗಿದೆ. ಸೌರ ವ್ಯವಸ್ಥೆಯ ಅತ್ಯಂತ ಬೃಹತ್ ಗೃಹವಾಗಿರುವ ಗುರುಗ್ರಹದಲ್ಲಿರುವ ಕೆಂಪುಕುಳಿಯಲ್ಲಿ ನಮ್ಮ ಭೂಮಿಯಂತಹ 100 ಭೂಮಿಗಳನ್ನು ಇರಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.
‘ಅನಿಲ ದೈತ್ಯ’ ಎಂದು ಹೆಸರಾಗಿರುವ , ಸೂರ್ಯನಿಂದ ಸುಮಾರು 1,43,000 ಕಿ.ಮೀ ವ್ಯಾಸದಲ್ಲಿರುವ ಗುರುಗ್ರಹದಲ್ಲಿ ಮೂಲತಃ ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳ ರಚನೆಯಿದ್ದು ಇತರ ಅನಿಲಗಳ ಜಾಡನ್ನೂ ಪತ್ತೆಹಚ್ಚಲಾಗಿದೆ. ಇದರಲ್ಲಿರುವ ಪಟ್ಟಿಗಳು ಹಾಗೂ ಬೃಹತ್ ಕೆಂಪುಕುಳಿಯಿಂದ ಗುರುಗ್ರಹ ಆಕರ್ಷಕ ಬಣ್ಣದಿಂದ ಅಲಂಕಾರಗೊಂಡಿದೆ. ಗುರುಗ್ರಹದ ದಕ್ಷಿಣದ ಅಂಚಿನಲ್ಲಿ ಸುಮಾರು 16,000 ಕಿ.ಮೀ ವ್ಯಾಪಿಸಿರುವ , ಅತೀ ವೇಗದಲ್ಲಿ ಅಪ್ರದಕ್ಷಿಣಾಕಾರದಲ್ಲಿ ಸುತ್ತುವ ಕಡುಗೆಂಪು ಬಣ್ಣದ ಮೋಡಗಳಿಂದ ರಚನೆಯಾಗಿರುವ ಬೃಹತ್ ಕೆಂಪು ಕುಳಿಯು ಹಲವು ಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದರೂ ಇದರ ಬಗ್ಗೆ ಇದುವರೆಗೆ ವಿಜ್ಞಾನಿಗಳಿಗೆ ಹೆಚ್ಚಿನ ಮಾಹಿತಿ ಲಭಿಸಿರಲಿಲ್ಲ.
ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ, ಈ ಚಂಡಮಾರುತ ಇಷ್ಟೊಂದು ಅಗಾಧವಾಗಿರುವ ಬಗ್ಗೆ ಹಾಗೂ ದೀರ್ಘಾವಧಿಯವರೆಗೆ ಅಸ್ತಿತ್ವದಲ್ಲಿರುವುದು ಒಗಟಾಗಿಯೇ ಉಳಿದಿದೆ. ಇದು ಎಷ್ಟೊಂದು ಅಗಲವಾಗಿದೆಯೆಂದರೆ ನಮ್ಮ ಭೂಮಿಯನ್ನೇ ನುಂಗಬಹುದು. ಗುರುಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿರುವ ಬಾಹ್ಯಾಕಾಶ ಸಂಶೋಧನೆ ಇದಾಗಿದೆ, ಯಾಕೆಂದರೆ ಗ್ರಹದ ಒಳಗಡೆ ಇಣುಕಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿದ ಪ್ರಥಮ ಅಧ್ಯಯನ ಇದಾಗಿದೆ ಎಂದು ಜೂನೊ ನೌಕೆಯ ಬಾಹ್ಯಾಕಾಶ ಕಾರ್ಯಕ್ರಮ ತಂಡದಲ್ಲಿದ್ದ ಪ್ರಧಾನ ಸಂಶೋಧಕ ಸ್ಕಾಟ್ ಬಾಲ್ಟನ್ ಹೇಳಿದ್ದಾರೆ. ಜುನೊ ಬಾಹ್ಯಾಕಾಶ ನೌಕೆಯು 2016ರಿಂದಲೇ ಗುರುಗೃಹವನ್ನು ಪ್ರದಕ್ಷಿಣೆ ಹಾಕುತ್ತಾ, ಅಲ್ಲಿನ ಪರಿಸರ, ಗೃಹದ ಒಳಗಡೆಯ ರಚನೆಗಳು, ಆಂತರಿಕ ಕಾಂತೀಯ ಕ್ಷೇತ್ರ, ಆಂತರಿಕ ಕಾಂತೀಯತೆಯಿಂದ ರೂಪುಗೊಂಡ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಗುರುಗ್ರಹದ ಬೃಹತ್ ಕೆಂಪುಕುಳಿ ಹಲವು ಸಾವಿರ ವರ್ಷಗಳಿಂದ ರೂಪುಗೊಳ್ಳುತ್ತಿದ್ದು ಇದರ ಗಾತ್ರ ಕ್ರಮೇಣ ಕಿರಿದಾಗುತ್ತಿರುವ ಸೂಚನೆಯಿದೆ ಎಂದು ಸಂಶೋಧಕರು ಹೇಳಿದ್ದಾರೆ.







