ನಕಲಿ ನೋಟು ದಂಧೆ: ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧ
ಬೆಂಗಳೂರು, ಅ.29: ನಕಲಿ ನೋಟು ದಂಧೆಯಲ್ಲಿ ಭಾಗಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಿ, ಖೋಟಾನೋಟು ಜಪ್ತಿ ಮಾಡಿಕೊಂಡಿದ್ದ ಗೋವಿಂದಪುರ ಪೊಲೀಸರು ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ಮುಂದುವರಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪೊಲೀಸರು ನಗರದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿ, ಒಟ್ಟು 5.80 ಕೋಟಿ ರೂ. ಜಪ್ತಿ ಮಾಡಿಕೊಂಡಿದ್ದರು. ಈ ಪೈಕಿ ಮೌಲ್ಯ ಕಳೆದುಕೊಂಡ 1000 ಹಾಗೂ 500 ರೂ. ಮೌಲ್ಯದ 80 ಲಕ್ಷ ಹಾಗೂ ಕೇರಳದ ಕಾಸರಗೂಡಿನ ಗೋದಾಮಿನಲ್ಲಿ 5 ಕೋಟಿ ಮೌಲ್ಯದ ಕಲರ್ ಜೆರಾಕ್ಸ್ ನೋಟುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಕಾಸರಗೂಡಿನಲ್ಲಿ ದಾಳಿ ಮಾಡುತ್ತಿದ್ದಂತೆ ಮಾಹಿತಿ ಅರಿತಿದ್ದ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದರು. ನಾಪತ್ತೆಯಾಗಿರುವ ಇಬ್ಬರು ಆರೋಪಿಗಳಿಗಾಗಿ ಗೋವಿಂದಪುರ ಪೊಲೀಸರ ವಿಶೇಷ ತಂಡ ಶೋಧ ಕಾರ್ಯ ಮುಂದುವರೆಸಿದೆ.
ಸುಮಾರು 24 ಮೂಟೆಗಳಲ್ಲಿ ಜಪ್ತಿ ಮಾಡಿಕೊಂಡಿರುವ 5 ಕೋಟಿ ರೂ. ಕಲರ್ ಜೆರಾಕ್ಸ್ ನೋಟಿನ ಜಾಲದ ಹಿಂದೆ ದೊಡ್ಡ ತಂಡವೇ ಕಾರ್ಯನಿರ್ವಹಿಸುತ್ತಿದ್ದು, ಕಾಸರಗೂಡಿಗೆ ದುಬೈದಿಂದ ನಕಲಿ ಹಣ ಜಾಲದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ತಮಿಳುನಾಡು ಮೂಲದ ಆರೋಪಿ ಮಂಜುನಾಥ್‍ಗೆ ಪ್ರಮುಖ ಆರೋಪಿಯ ನೇರ ಸಂಪರ್ಕ ಹೊಂದಿದ್ದ ಎನ್ನಲಾಗುತ್ತಿದೆ. ಮೊದಲು ಬಡ್ಡಿ ಹಣದ ವ್ಯವಹಾರ ಮಾಡುತ್ತಿದ್ದ ಈತ ಪ್ರಮುಖ ಆರೋಪಿಯ ಸಂಪರ್ಕ ಬೆಳೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.







