ಪೆಲೆಸ್ತೀನ್ ಮಾನವಹಕ್ಕು ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದ ಇಸ್ರೇಲ್ ಕ್ರಮಕ್ಕೆ ಅಮೆರಿಕ ಸಂಸದೆ ಖಂಡನೆ

ಚಿಕಾಗೊ, ಅ.29: ಮಾನವ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುವ 6 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಹೆಸರಿಸಿದ ಇಸ್ರೇಲ್ ಕ್ರಮವನ್ನು ಖಂಡಿಸುವ ನಿರ್ಣಯವನ್ನು ಅಮೆರಿಕದ ಸಂಸದೆ, ಸಂಸತ್ತಿನ ರಕ್ಷಣಾ ವಿನಿಯೋಗ ಉಪಸಮಿತಿ ಅಧ್ಯಕ್ಷೆ ಬೆಟ್ಟೀ ಮೆಕಲಮ್ ಮಂಡಿಸಿದ್ದಾರೆ.
ಕೈದಿಗಳಿಗೆ ಕಾನೂನು ನೆರವು ಒದಗಿಸುವ ಮತ್ತು ಬಂಧನ ಹಾಗೂ ವಶಕ್ಕೆ ಪಡೆದವರ ಬಗ್ಗೆ ಅಂಕಿಅಂಶ ಒದಗಿಸುವ ಪೆಲೆಸ್ತೀನ್ ಸಂಘಟನೆ ಅದ್ದಾಮೀರ್, ಮಾನವ ಹಕ್ಕು ಉಲ್ಲಂಘನೆ ಪ್ರಕರಣದ ದಾಖಲೆ ಸಂಗ್ರಹಿಸುವ, ಪೆಲೆಸ್ತೀನ್ ಸಂಘಟನೆ ಅಲ್-ಹಖ್, ಮಕ್ಕಳ ರಕ್ಷಣೆಗಾಗಿನ ಅಂತರಾಷ್ಟ್ರೀಯ ಪೆಲೆಸ್ತೀನ್ ಸಂಘಟನೆ, ಯೂನಿಯನ್ ಆಫ್ ಅಗ್ರಿಕಲ್ಚರಲ್ ವರ್ಕ್ ಕಮಿಟಿ, ಬಿಸನ್ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್, ಯೂನಿಯನ್ ಆಫ್ ಪೆಲೆಸ್ತೀನ್ ವುಮೆನ್ ಕಮಿಟಿಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ನಿಯೋಜಿಸುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಬೆನ್ನೀ ಗಾಂಟ್ಸ್ ಶುಕ್ರವಾರ ಹೇಳಿದ್ದರು.
ಭಯೋತ್ಪಾದಕ ಸಂಘಟನೆಯೆಂದು ಘೋಷಿತವಾದ ಸಂಸ್ಥೆಗಳ ಕಚೇರಿಯನ್ನು ಮುಚ್ಚುವ, ಆಸ್ತಿಗಳನ್ನು ಮುಟ್ಟುಗೋಲು ಹಾಕುವ, ವಿಚಾರಣೆಯಿಲ್ಲದೆ ಸಿಬಂದಿಗಳನ್ನು ಬಂಧನದಲ್ಲಿಡಲು ಅಧಿಕಾರಿಗಳಿಗೆ ಅಧಿಕಾರವಿರುತ್ತದೆ. ಸೇನೆಯ ಆಕ್ರಮಣದಡಿ ಬದುಕುತ್ತಿರುವ ಜನತೆಯ ಹಕ್ಕುಗಳ ಪರವಾಗಿರುವ ಮಾನವಹಕ್ಕು ಸಂಘಟನೆಗಳ ಕಾರ್ಯವನ್ನು ನಿಷ್ಕ್ರಿಯಗೊಳಿಸಲು ಸರಕಾರ ‘ಭಯೋತ್ಪಾದಕ’ ಎಂಬ ಪದವನ್ನು ಆಯುಧವಾಗಿ ಬಳಸುವುದು ಆರೋಗ್ಯವಂತ ಪ್ರಜಾಪ್ರಭುತ್ವದ ಲಕ್ಷಣವಲ್ಲ, ದುರ್ಬಲ ಸರ್ವಾಧಿಕಾರಿ ಯುಗದ ಸಂಕೇತವಾಗಿದೆ ಎಂದು ಬೆಟ್ಟೀ ಮೆಕಲಮ್ ಹೇಳಿದ್ದಾರೆ.
ಈ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸುವ ಇಸ್ರೇಲ್ನ ನಿರ್ಧಾರವು ಇಸ್ರೇಲ್ನ ಅತಿಕ್ರಮಣ ಹಿಂಸಾತ್ಮಕ, ಅನೈತಿಕ ಮತ್ತು ಅನ್ಯಾಯದ ನಡೆಯಾಗಿದೆ ಮತ್ತು ಪೆಲೆಸ್ತೀನ್ನ ಮಕ್ಕಳು, ಮಹಿಳೆಯರು ರೈತರು ಅಥವಾ ಖೈದಿಗಳ ಹಕ್ಕುಗಳನ್ನು ಸಮರ್ಥಿಸುವ ಶಾಂತಿಯುತ ಹೋರಾಟ ಅಕ್ರಮ ಎಂದು ಘೋಷಿಸುವ ಹುನ್ನಾರವಾಗಿದೆ ಎಂದವರು ಹೇಳಿದ್ದಾರೆ.
ಅಮೆರಿಕವು ತೆರಿಗೆದಾರರ ಬಿಲಿಯಾಂತರ ಹಣವನ್ನು ಇಸ್ರೇಲ್ನ ಭದ್ರತೆಗೆ ನೆರವಾಗಲು ವಿನಿಯೋಗಿಸುತ್ತದೆ, ಆದರೆ ಇಸ್ರೇಲ್ನ ಆಕ್ರಮಣಕಾರಿ ವ್ಯವಸ್ಥೆಯನ್ನಲ್ಲ, ಅಥವಾ ಪೆಲೆಸ್ತೀನಿಯರನ್ನು ದಮನಿಸುವ ಕಾರ್ಯಕ್ಕಲ್ಲ. ಈ ಹಿನ್ನೆಲೆಯಲ್ಲಿ ಸದನದಲ್ಲಿರುವ ಡೆಮಾಕ್ರಾಟ್ಗಳು ಹಾಗೂ ಬೈಡೆನ್ ಆಡಳಿತವು ಇಸ್ರೇಲ್ನ ನಿರ್ಧಾರವನ್ನು ಖಂಡಿಸುವ ಮೂಲಕ ಪೆಲೆಸ್ತೀನ್ನ ನಾಗರಿಕ ಸಮಾಜವನ್ನು ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ದಮನಿಸುವ ಕಾರ್ಯವನ್ನು ಸಹಿಸಲಾಗದು ಎಂಬ ಸ್ಪಷ್ಟ ಸಂದೇಶ ನೀಡಬೇಕಾಗಿದೆ ಎಂದವರು ಹೇಳಿದ್ದಾರೆ.







