ವಿಶ್ವಕಪ್: ಪಾಕಿಸ್ತಾನಕ್ಕೆ ಹ್ಯಾಟ್ರಿಕ್ ಜಯ
ಅಫ್ಘಾನಿಸ್ತಾನಕ್ಕೆ 5 ವಿಕೆಟ್ ಸೋಲು
photo: ICC
ದುಬೈ, ಅ.29: ನಾಯಕ ಬಾಬರ್ ಆಝಂ ಅರ್ಧಶತಕ(51,47 ಎಸೆತ) ಹಾಗೂ ಅಸಿಫ್ ಅಲಿ ಅವರ ಅಬ್ಬರದ ಬ್ಯಾಟಿಂಗ್(25 ರನ್, 7 ಎಸೆತ, )ನೆರವಿನಿಂದ ಪಾಕಿಸ್ತಾನ ತಂಡ ಅಫ್ಘಾನಿಸ್ತಾನದ ವಿರುದ್ಧ ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12ರ ಸುತ್ತಿನ ಗ್ರೂಪ್-2ರ 24ನೇ ಪಂದ್ಯದಲ್ಲಿ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ಮಿಂಚಿದೆ.
ಪಾಕಿಸ್ತಾನವು ಟೂರ್ನಿಯಲ್ಲಿ ಈಗಾಗಲೇ ಭಾರತ, ನ್ಯೂಝಿಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿತ್ತು.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 147 ರನ್ ಗುರಿ ಪಡೆದಿದ್ದ ಪಾಕಿಸ್ತಾನ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ ಮನ್ ಮುಹಮ್ಮದ್ ರಿಝ್ವಾನ್(8) ಬೇಗನೆ ಔಟಾದರು. ಆಗ ಜೊತೆಯಾದ ಬಾಬರ್ ಆಝಂ(51,47 ಎಸೆತ, 4 ಬೌಂಡರಿ )ಹಾಗೂ ಫಖರ್ ಝಮಾನ್(30, 25 ಎಸೆತ)63 ರನ್ ಜೊತೆಯಾಟ ನಡೆಸಿದರು. ಮುಹಮ್ಮದ್ ಹಫೀಝ್ (10) ಹಾಗೂ ಶುಐಬ್ ಮಲಿಕ್(19) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ತಂಡವು ಸೋಲಿನ ಭೀತಿಯಲ್ಲಿದ್ದಾಗ ಅಸಿಫ್ ಅಲಿ ಕೇವಲ 7 ಎಸೆತಗಳಲ್ಲಿ 4 ಸಿಕ್ಸರ್ ಗಳನ್ನು ಸಿಡಿಸಿ ಇನ್ನೂ 1 ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.