ಉದ್ಯಾವರ: ವಾಣಿಜ್ಯ ಕಟ್ಟಡದ ಕೋಣೆಯಲ್ಲಿ ಸಂಗ್ರಹಿಸಿಟ್ಟ ತ್ಯಾಜ್ಯ ವಿಲೇವಾರಿಗೆ ಆಗ್ರಹ

ಉಡುಪಿ, ಅ.29: ಉದ್ಯಾವರ ಗ್ರಾಮ ಪಂಚಾಯತ್ ವತಿಯಿಂದ ಮನೆ ಮನೆಗಳಿಂದ ಸಂಗ್ರಹಿಸಲ್ಪಟ್ಟ ಹಸಿ ಹಾಗೂ ಒಣ ತ್ಯಾಜ್ಯವನ್ನು ಪಂಚಾಯತ್ ಬಳಿಯಿರುವ ವಾಣಿಜ್ಯ ಕಟ್ಟಡದಲ್ಲಿರುವ ಎರಡು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿರುವ ವಿಚಾರ ಇಂದು ಬೆಳಕಿಗೆ ಬಂದಿದೆ.
ಕಸವನ್ನು ಸಂಗ್ರಹಿಸಿಟ್ಟ ಕೊಠಡಿಯ ಸಮೀಪದ ಕೊಠಡಿಯಲ್ಲಿ ಅಂಗನವಾಡಿ ಇದ್ದು ಕಸದಿಂದ ಹುಟ್ಟಿಕೊಂಡಿರುವ ಹುಳಗಳು ಅಂಗನವಾಡಿಯ ಕೋಣೆಯೊಳಗೆ ಹರಿದಾಡುತ್ತಿದೆ. ಇದರ ವಾಸನೆಗೆ ಜನಸಾಮಾನ್ಯರು ಮೂಗು ಹಿಡಿದು ಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಕಾರ್ಯ ಕರ್ತರಾದ ಅನ್ಸಾರ್ ಅಹ್ಮದ್ ಹಾಗೂ ಪ್ರಮೋದ್ ಉಚ್ಚಿಲ ಆರೋಪಿಸಿದ್ದಾರೆ.
ಸುಮಾರು 30 ಮೀಟರ್ ವ್ಯಾಪ್ತಿಯಲ್ಲಿ ಸರಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಕಿತ್ಸಾಲಯ ಮತ್ತು ಗ್ರಂಥಾಲಯಗಳಿವೆ. ಆದುದರಿಂದ ಈ ರೀತಿ ಕೋಣೆಯಲ್ಲಿ ಸಂಗ್ರಹಿಸಲ್ಪಟ್ಟ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಅವರು ಉಡುಪಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ.
Next Story





