ಕೇರಳ ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸುಪ್ರೀಂ ನೋಟಿಸ್
ಅಲ್ಪಸಂಖ್ಯಾತರ ಶಿಷ್ಯ ವೇತನ

ಹೊಸದಿಲ್ಲಿ, ಅ. 29: ಅರ್ಹತೆ ಆಧಾರದಲ್ಲಿ ಶಿಷ್ಯ ವೇತನ ನೀಡುವ ಮೂಲಕ ಅಲ್ಪಸಂಖ್ಯಾತರನ್ನು ಉಪ ವರ್ಗೀಕರಿಸುವ ಕೇರಳ ರಾಜ್ಯ ಸರಕಾರದ ಆದೇಶವನ್ನು ರದ್ದುಗೊಳಿಸಿರುವ ಕೇರಳ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ರಾಜ್ಯ ಸರಕಾರ ಸಲ್ಲಿಸಿದ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ ಹಾಗೂ ಇತರರ ಪ್ರತಿಕ್ರಿಯೆ ಕೋರಿದೆ.
ಕೇರಳ ರಾಜ್ಯ ಸರಕಾರದ ಮೇಲ್ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ.ಆರ್. ಗವಾಯಿ ಅವರನ್ನು ಒಳಗೊಂಡ ಪೀಠ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ, ಅಲ್ಪಸಂಖ್ಯಾತರ ಕೇರಳ ರಾಜ್ಯ ಆಯೋಗ ಹಾಗೂ ಇತರರಿಗೆ ನೋಟಿಸು ಜಾರಿ ಮಾಡಿದೆ ಹಾಗೂ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಶೇ. 80 ಮುಸ್ಲಿಂ ಸಮುದಾಯಕ್ಕೆ, ಶೇ. 20 ಲ್ಯಾಟಿನ್ ಕೆಥೋಲಿಕ್ ಕ್ರೈಸ್ತರು ಹಾಗೂ ಮತಾಂತರಗೊಂಡ ಕ್ರೈಸ್ತರಿಗೆ ಅರ್ಹತೆ ಆಧಾರದಲ್ಲಿ ಶಿಷ್ಯ ವೇತನ ನೀಡುವ ಮೂಲಕ ಅಲ್ಪಸಂಖ್ಯಾತರನ್ನು ಉಪ ವರ್ಗೀಕರಿಸುವ ಕೇರಳ ಸರಕಾರದ ಮೇ 28ರ ಆದೇಶವನ್ನು ಕೇರಳ ಉಚ್ಚ ನ್ಯಾಯಾಲಯ ರದ್ದುಗೊಳಿಸಿತ್ತು. ಇದನ್ನು ಕಾನೂನು ಬದ್ಧವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿತ್ತು.
ಕೇರಳ ಸರಕಾರದ ಪರವಾಗಿ ಹಿರಿಯ ನ್ಯಾಯವಾದಿ ಸಿ.ಯು. ಸಿಂಗ್ ಹಾಜರಾಗಿದ್ದರು. ಇದಲ್ಲದೆ, ಖಾಸಗಿ ಸಂಸ್ಥೆಗಳಾದ ಮೈನಾರಿಟಿ ಇಂಡಿಯನ್ಸ್ ಪ್ಲಾನಿಂಗ್, ವಿಜಿಲೆನ್ಸ್ ಕಮಿಷನ್ ಟ್ರಸ್ಟ್ ಹಾಗೂ ಎಂಎಸ್ಎಂ ಕೇರಳ ಸ್ಟೇಟ್ ಕಮಿಟಿ ಸಲ್ಲಿಸಿದ ಎರಡು ಮನವಿಗೆ ಸಂಬಂಧಿಸಿ ಕೂಡ ಪೀಠ ನೋಟಿಸು ಜಾರಿ ಮಾಡಿದೆ.







