ಪಿಎಫ್‌ಐ ಬಗ್ಗೆ ನಕಲಿ ಸುದ್ದಿ ಪ್ರಸಾರ: ಅರ್ನಬ್ ಗೋಸ್ವಾಮಿಗೆ ದಿಲ್ಲಿ ನ್ಯಾಯಾಲಯ ಸಮನ್ಸ್

ಹೊಸದಿಲ್ಲಿ, ಅ. 29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ದಿಲ್ಲಿ ನ್ಯಾಯಾಲಯ ರಿಪಬ್ಲಿಕ್ ಟಿವಿ, ಅದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಅರ್ನಬ್ ಗೋಸ್ವಾಮಿ ಹಾಗೂ ಅದರ ಸಂಪಾದಕಿ ಅನನ್ಯಾ ವರ್ಮ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಸೆಪ್ಟಂಬರ್ 23ರಂದು ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮುಸ್ಲಿಮರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿ ಪಿಎಫ್‌ಐ ವಿರುದ್ಧ ಮಾನ ಹಾನಿಕರ ಹಾಗೂ ಸುಳ್ಳು ಸುದ್ದಿಗಳನ್ನು ರಿಪಬ್ಲಿಕ್ ಟಿ.ವಿ. ಪ್ರಸಾರ ಮಾಡಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಸೆಪ್ಟಂಬರ್ 27ರಂದು ರಿಪಬ್ಲಿಕ್ ಟಿ.ವಿ. ‘ದರಾಂಗ್ ಗೋಲಿಬಾರ್: ಪಿಎಫ್‌ಐ ನಂಟು ಹೊಂದಿದ ಇಬ್ಬರ ಬಂಧನ’, ‘ಪ್ರತಿಭಟನೆಗೆ ಜನರನ್ನು ಸಜ್ಜುಗೊಳಿಸಿದೆ’, ‘ಅಸ್ಸಾಂ ಹಿಂಸಾಚಾರ: ಇಬ್ಬರು ಪಿಎಫ್‌ಐ ಸದಸ್ಯರ ಬಂಧನ’, ‘ಪಿಎಫ್‌ಐ ಸದಸ್ಯರ ವಿರುದ್ಧ ಪಿತೂರಿ ಆರೋಪ’ ‘ಪಿಎಫ್‌ಐಯ ಇಬ್ಬರು ಸದಸ್ಯರಾದ ಮುಹಮ್ಮದ್ ಅಸ್ಮತ್ ಅಲಿ ಅಹ್ಮದ್ ಹಾಗೂ ಮುಹಮ್ಮದ್ ಚಾಂದ್ ಮಮೂದ್ ಪೊಲೀಸ್ ವಶಕ್ಕೆ’ ಮೊದಲಾದ ರನ್ನಿಂಗ್ ಶೀರ್ಷಿಕೆ ಹಾಕಿತ್ತು.
ಸುಳ್ಳು, ನಕಲಿ ಸುದ್ದಿ/ವರದಿ/ ಪ್ರಸಾರಕ್ಕೆ ನಿಶ್ಯರ್ತ ಕ್ಷಮೆ ಕೋರಿ ಪಿಎಫ್‌ಐ ಸೆಪ್ಟಂಬರ್ 30ರಂದು ರಿಪಬ್ಲಿಕ್ ಟಿ.ವಿ.ಗೆ ನೋಟಿಸು ನೀಡಿತ್ತು. ಆದರೆ, ರಿಪಬ್ಲಿಕ್ ಟಿ.ವಿ.ಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ ಪಿಎಫ್‌ಐ ತನ್ನ ಸಾರ್ವಜನಿಕ ಸಂಪರ್ಕ ನಿರ್ದೇಶಕ ಸಲೀಮ್ ಶೇಖ್ ಮೂಲಕ ದಿಲ್ಲಿಯ ಸಾಕೇತ್‌ನ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರ ಮುಂದೆ ಅಕ್ಟೋಬರ್ 23ರಂದು ಮೊಕದ್ದಮೆ ದಾಖಲಿಸಿತ್ತು.