ಬಿಜೆಪಿ ಮುಖಂಡರಿಗೆ ಸಮೀರ್ ವಾಂಖೆಡೆ ನಂಟು ಚಳಿಗಾಲದ ಅಧಿವೇಶನದಲ್ಲಿ ಬಯಲಿಗೆ: ಮಲಿಕ್

ಮುಂಬೈ, ಅ.29: ಮಾದಕದ್ರವ್ಯ ನಿಯಂತ್ರಣ ಬ್ಯೂರೋದ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರಿಸಿರುವ ಎನ್ಸಿಪಿ ವಕ್ತಾರ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, ‘ಈ ಅಧಿಕಾರಿಯ ಜೊತೆ ಕೆಲವು ಬಿಜೆಪಿ ನಾಯಕರಿಗಿರುವ ನಂಟನ್ನು ಡಿಸೆಂಬರ್ನಲ್ಲಿ ನಡೆಯಲಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಬಯಲುಗೊಳಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ವಿಹಾರ ನೌಕೆಯಲ್ಲಿ ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಕ್ಖಾನ್ ಪುತ್ರ ಆರ್ಯನ್ ಖಾನ್ಗೆ ಜಾಮೀನು ದೊರೆತ ಬಳಿಕ ಪಿಕ್ಚರ್ ಅಬಿ ಬೀ ಬಾಕಿ ಹೈ (ಸಿನೆಮಾ ಇನ್ನೂ ಮುಗಿದಿಲ್ಲ) ಎಂದವರು ಟ್ವೀಟ್ ಮಾಡಿದ್ದರು. ನಕಲಿದಾಖಲೆಗಳನ್ನು ಸೃಷ್ಟಿಸಿ, ಪರಿಶಿಷ್ಟ ಅಭ್ಯರ್ಥಿಗೆ ಮೀಸಲಾಗಿದ್ದ ಉದ್ಯೋಗವನ್ನು ಪಡೆದುದಕ್ಕಾಗಿ ವಾಂಖೆಡೆ ತನ್ನ ಕೆಲಸವನ್ನು ಕಳೆದುಕೊಳ್ಳಲಿದ್ದು, ಆಗ ಸಿನೆಮಾ ಕೊನೆಗೊಳ್ಳಲಿದೆ ಎಂದು ಮಲಿಕ್ ಟ್ವೀಟಿಸಿದ್ದಾರೆ.
ಮುಂಬೈಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಮಲಿಕ್ ‘ ಕೆಲವು ಬಿಜೆಪಿ ನಾಯಕರಿಗೆ ವಾಂಖೆಡೆ ಜೊತೆಗಿರುವ ಸಂಬಂಧವನ್ನು ಡಿಸೆಂಬರ್ 7ರಂದು ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಬಯಲಿಗೆಳೆಯಲಿದ್ದೇನೆ ಎಂದರು. ಚಳಿಗಾಲದ ಅಧಿವೇಶನವು ಕೋಲಾಹಲಕರವಾಗಲಿದೆ, ವಾಂಖೆಡೆ ಜೊತೆ ನಂಟಿರುವ ಬಿಜೆಪಿ ನಾಯಕರ ಹೆಸರು ಬಹಿರಂಗವಾದ ಬಳಿಕ ಅವರಿಗೆ ತಮ್ಮ ಮುಖವನ್ನು ಸಾರ್ವಜನಿಕವಾಗಿ ತೋರಿಸಲು ಸಾಧ್ಯವಾಗದು ಎಂದರು.
ಫ್ಯಾಶನ್ ಟಿವಿ ವರಿಷ್ಠ ಖಾಶಿಫ್ ಖಾನ್ ಅವರು ಡ್ರಗ್ಸ್ ಪತ್ತೆಯಾದ ಕೊರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ಪಾರ್ಟಿಯನ್ನು ಆಯೋಜಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಕೊರ್ಡೆಲಿಯಾ ಡ್ರಗ್ ಪಾರ್ಟಿ ಕುರಿತ ಜಾಹೀರಾತನ್ನು ಕೂಡಾ ಆತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದ. ಆದಾಗ್ಯೂ ಆತನನ್ನು ಎನ್ಸಿಬಿ ಅಧಿಕಾರಿಗಳು ಒಮ್ಮೆಯೂ ವಿಚಾರಣೆಗಾಗಿ ಕರೆಸಿಕೊಳ್ಳಲಿಲ್ಲ ಎಂದು ಮಲಿಕ್ ಆಪಾದಿಸಿದರು.







