ಪರಿಶಿಷ್ಟರ ವಿರುದ್ಧದ ದೌರ್ಜನ್ಯ ಗತಿಸಿದ ವಿಚಾರವಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧದ ದೌರ್ಜನ್ಯ ಗತಿಸಿದ ವಿಚಾರವಲ್ಲ ಹಾಗೂ ಈ ಸಮುದಾಯಗಳ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆಂದು ಇರುವ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ತಡೆ ಕಾಯಿದೆಯಡಿ ಕೊಲೆ ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬನಿಗೆ ರಾಜಸ್ಥಾನ ಹೈಕೋರ್ಟ್ ಮಂಜೂರುಗೊಳಿಸಿದ ಜಾಮೀನನ್ನು ಬದಿಗೆ ಸರಿಸುವ ವೇಳೆ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ಅವರ ಪೀಠ ಮೇಲಿನಂತೆ ಹೇಳಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಹತ್ಯೆಗೀಡಾದ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು, ತಮಗೆ ಪರಿಶಿಷ್ಟ ಜಾತಿ/ಪಂಗಡ ಕಾನೂನಿನ ಸೆಕ್ಷನ್ 15ಎ ರ ಪ್ರಕಾರ ನೋಟಿಸ್ ಜಾರಿಗೊಳಿಸಿರಲಿಲ್ಲ ಎಂದು ದೂರಿದ್ದರು.
ಸಂತ್ರಸ್ತ ಅಥವಾ ಅವರ ಅವಲಂಬಿತರಿಗೆ ಸೆಕ್ಷನ್ 15ಎ ಅನ್ವಯ ನೋಟಿಸ್ ಜಾರಿಗೊಳಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆ, ಜಾಮೀನು ನೀಡಿಕೆ, ತೀರ್ಪುಗಳ ಕುರಿತ ಮಾಹಿತಿಯನ್ನು ಸಂಬಂಧಿತರಿಗೆ ನೀಡುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ.