ಕಾಂಗ್ರೆಸ್ ರಾಜಕೀಯದ ಬಗ್ಗೆ ಗಂಭೀರವಾಗಿಲ್ಲದ ಕಾರಣ ಮೋದಿ ಹೆಚ್ಚು ಶಕ್ತಿಶಾಲಿಯಾಗುತ್ತಾರೆ: ಮಮತಾ ಬ್ಯಾನರ್ಜಿ

ಪಣಜಿ: ಕಾಂಗ್ರೆಸ್ ಪಕ್ಷವು ರಾಜಕೀಯದ ಬಗ್ಗೆ ಗಂಭೀರವಾಗಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಶಕ್ತಿಶಾಲಿಯಾಗುತ್ತಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವರಿಷ್ಠೆ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ ಹಾಗೂ ಹಳೆಯ ಪಕ್ಷವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ಅವರು ದಿಲ್ಲಿಯ 'ದಾದಾಗಿರಿ' (ಬೆದರಿಕೆ) ಸಾಕಷ್ಟು ಇದೆ ಎಂದು ಹೇಳಿದರು.
ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕರಾವಳಿ ರಾಜ್ಯಕ್ಕೆ ತನ್ನ ಮೂರು ದಿನಗಳ ಭೇಟಿಯ ಕೊನೆಯ ದಿನದಂದು ಪಣಜಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಕಾಂಗ್ರೆಸ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ದೇಶವು ನರಳುತ್ತಿದೆ ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸದ ಕಾರಣ ನಾನು ಈಗಲೇ ಎಲ್ಲವನ್ನೂ ಹೇಳಲಾರೆ. ಮೋದಿಜಿ ಕಾಂಗ್ರೆಸ್‌ನಿಂದಾಗಿಯೇ ಹೆಚ್ಚು ಶಕ್ತಿಶಾಲಿಯಾಗಲಿದ್ದಾರೆ. ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ದೇಶವೇಕೆ ಅದನ್ನು ಅನುಭವಿಸಬೇಕು?" ಮಮತಾ ಪ್ರಶ್ನಿಸಿದರು.





