ಕೊವ್ಯಾಕ್ಸಿನ್ ಪಡೆದವರಿಗೆ ಕೋವಿಶೀಲ್ಡ್ ನೀಡುವಂತೆ ಹೇಳಿ ಜನರ ಜೀವದೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ: ಸುಪ್ರೀಂ

ಹೊಸದಿಲ್ಲಿ: ಕೊವ್ಯಾಕ್ಸಿನ್ ಕೋವಿಡ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಇನ್ನೂ ಲಭಿಸದ ಕಾರಣ ವಿದೇಶಗಳಿಗೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ ಎಂದು ದೂರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ಸುಪ್ರೀಂ ಕೋರ್ಟ್, ಈಗಾಗಲೇ ಕೊವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಮತ್ತೆ ಕೋವಿಶೀಲ್ಡ್ ಲಸಿಕೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿ ಜನರ ಜೀವಗಳೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
"ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಗಾಗಿ ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿದೆ ಎಂದು ನಾವು ದಿನಪತ್ರಿಕೆಗಳಲ್ಲಿ ಓದಿದ್ದೇವೆ. ನಾವು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿಕ್ರಿಯೆಗಾಗಿ ಕಾಯೋಣ. ದೀಪಾವಳಿ ರಜೆಯ ನಂತರ ಮತ್ತೆ ಈ ವಿಚಾರ ಕೈಗೆತ್ತಿಕೊಳ್ಳೋಣ,'' ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ಅವರ ಪೀಠ ಹೇಳಿದೆ.
ಅರ್ಜಿದಾರ, ವಕೀಲ ಕಾರ್ತಿಕ್ ಸೇಠ್ ತಮ್ಮ ಪರ ವಾದ ಮಂಡಿಸುತ್ತಾ "ಕೊವ್ಯಾಕ್ಸಿನ್ ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆಯದೇ ಇರುವುದರಿಂದ ಪ್ರತಿ ದಿನ ವಿದೇಶಗಳಿಗೆ ತೆರಳಲು ಬಯಸುವವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಈಗಿನ ವ್ಯವಸ್ಥೆಯಡಿ ಕೊವ್ಯಾಕ್ಸಿನ್ ಪಡೆದವರು ಮತ್ತೆ ಕೋವಿಶೀಲ್ಡ್ ಪಡೆಯಲು ಸಾಧ್ಯವಿಲ್ಲ ಆದರೆ ಈ ನಿಟ್ಟಿನಲ್ಲಿ ಕೇಂದ್ರಕ್ಕೆ ಸೂಚನೆ ನೀಡಬೇಕು,''ಎಂದು ಕೋರಿದ್ದರು.