ರೈತರ ಲಂಗರ್ ಗೆ ಆರ್ಥಿಕ ಸಹಾಯ ನಿಲ್ಲಿಸದಿದ್ದರೆ ಭಾರತ ಪ್ರವೇಶಿಸುವಂತಿಲ್ಲ ಎಂದು ಹೇಳಲಾಗಿದೆ: ಅನಿವಾಸಿ ಉದ್ಯಮಿ ಆರೋಪ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದೇಶವನ್ನು ಪ್ರವೇಶಿಸಬೇಕಿದ್ದರೆ ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಲಂಗರ್ ಗಳನ್ನು ನಿಲ್ಲಿಸಬೇಕೆಂದು ತಮಗೆ ಭಾರತೀಯ ಇಮ್ಮಿಗ್ರೇಶನ್ ಅಧಿಕಾರಿಗಳು ಸೂಚಿಸಿದ್ದಾರೆಂದು ಅಮೆರಿಕಾ ಮೂಲದ ಉದ್ಯಮಿ ದರ್ಶನ್ ಸಿಂಗ್ ಧಲಿವಾಲ್ ಆರೋಪಿಸಿದ್ದಾರೆ ಎಂದು The Wire ವರದಿ ಮಾಡಿದೆ.
ಅಕ್ಟೋಬರ್ 23 ರಾತ್ರಿ ದಿಲ್ಲಿಗೆ ವಿಮಾನದಲ್ಲಿ ಆಗಮಿಸಿದ ಅಮೆರಿಕಾ ಪೌರ, ಭಾರತೀಯ ಮೂಲದ ಧಲಿವಾಲ್ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.
ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರಿಗೆ ಲಂಗರ್ ಅಥವಾ ಸಮುದಾಯ ಪಾಕಶಾಲೆಯನ್ನು ಆರಂಭಿಸಿದ ನಂತರ ಧಲಿವಾಲ್ ಅವರು ಜನವರಿ, ಎಪ್ರಿಲ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಭಾರತಕ್ಕೆ ಆಗಮಿಸಿದ್ದರು.
ನಾನು ಭಾರತಕ್ಕೆ ಆಗಮಿಸಿದಾಗಲೆಲ್ಲಾ ಅಧಿಕಾರಿಗಳು ನಾನೇಕೆ ರೈತರನ್ನು ಬೆಂಬಲಿಸಿ ಲಂಗರ್ ನಡೆಸುತ್ತಿದ್ದೇನೆಂದು ಕೇಳುತ್ತಿದ್ದರು. ನಾನು ಇವುಗಳನ್ನು ಲಘುವಾಗಿ ಪರಿಗಣಿಸಿದ್ದೆ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ ಕೆಲ ದಿನಗಳ ಹಿಂದೆ ಅವರು ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಆಗಮಿಸಿದಾಗ ಎರಡು ಗಂಟೆಗಳ ಕಾಯಿಸಿ ಮರಳಿ ಅಮೆರಿಕಾಗೆ ತೆರಳುವಂತೆ ಸೂಚಿಸಲಾಗಿದೆ.
ಹಿಂದಿನ ರೀತಿಯೇ ಈ ಬಾರಿಯೂ ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ, ಇದಕ್ಕೆ ಧಲಿವಾಲ್ ಅವರನ್ನು ಮತ್ತಷ್ಟು ವಿವರ ಕೇಳಿದಾಗ "ಮೇಲಿನಿಂದ ಆದೇಶವಿದೆ'' ಎಂಬ ಉತ್ತರ ದೊರಕಿದೆಯೆನ್ನಲಾಗಿದೆ.
ತಮ್ಮ ತಂದೆಯ ಸ್ಮರಣಾರ್ಥ ಜನವರಿ 6ರಿಂದ ಅವರು ಸಿಂಘು ಗಡಿಯಲ್ಲಿ ಲಂಗರ್ ಅನ್ನು ಪ್ರಾಯೋಜಿಸಿದ್ದಾರೆ. ಅಮೆರಿಕಾಗೆ 1972ರಲ್ಲಿ ತೆರಳಿದ್ದ ಅವರು ಅಲ್ಲಿ 100ಕ್ಕೂ ಅಧಿಕ ಪೆಟ್ರೋಲ್ ಮತ್ತು ಗ್ಯಾಸ್ ಸ್ಟೇಷನ್ ಹೊಂದಿದ್ದಾರೆ.