ಪುತ್ತೂರಿನ ಬಾಲ ಪ್ರತಿಭೆಗೆ ಆತ್ಮವಿಶ್ವಾಸ ತುಂಬಿದ್ದ 'ಅಪ್ಪು'

ಪುತ್ತೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನ ವಾರ್ತೆಯು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಕರ್ನಾಟಕವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಪುನೀತ್ ರಾಜ್‍ಕುಮಾರ್ ಅವರಿಗೆ ಪುತ್ತೂರಿನೊಂದಿಗೆ ನಂಟು ಇದೆ. ಪುನೀತ್ ಈ ಹಿಂದೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅಲ್ಲದೆ ಪುತ್ತೂರಿನಲ್ಲಿ ನಡೆದ ಹೆಸರಾಂತ ಜಾನಪದ ಕ್ರೀಡೆಯಾದ ಕೋಟಿ ಚೆನ್ನಯ ಜೋಡು ಕರೆ ಕಂಬಳದಲ್ಲಿಯೂ ಭಾಗವಹಿಸಿ ಕಂಬಳದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ವಯಸ್ಸಿನ ವ್ಯತ್ಯಾಸ ನೋಡದೆ ಅಬಾಲ ವೃದ್ಧರಾದಿಯಾಗಿ ಎಲ್ಲರೊಡನೆಯೂ ಆತ್ಮೀಯತೆಯಿಂದ ಬೆರೆಯುತ್ತಿದ್ದ ಪುನೀತ್ ರಾಜ್‍ಕುಮಾರ್ ಅವರು, ಹಲವು ಬಾಲ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಅವರು ಬೆನ್ನು ತಟ್ಟಿ ಬೆಳೆಸಿದ ಬಾಲ ಪ್ರತಿಭೆಯೊಬ್ಬರು ಪುತ್ತೂರಿನಲ್ಲಿದ್ದಾರೆ. ಈ ಬಾಲ ಕಲಾವಿದೆ ಡ್ಯಾನ್ಸ್ ಮೂಲಕ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದ ಪುತ್ತೂರಿನ ಬೆಟ್ಟಂಪಾಡಿ ನಿವಾಸಿ ದಯಾನಂದ ರೈ ಅವರ ಪುತ್ರಿ, ಪುತ್ತೂರಿನ ಸುಧಾನ ವಸತಿ ಶಾಲೆಯಲ್ಲಿ ಪ್ರಸ್ತುತ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ದೀಕ್ಷಾ ರೈ. ಇವರು ಪುನೀತ್ ಅವರನ್ನು ಹತ್ತಿರದಿಂದ ಬಲ್ಲವರು.
ಖಾಸಗಿ ವಾಹಿನಿಯಲ್ಲಿ ನಡೆದ 'ಡ್ಯಾನ್ಸ್ ಡ್ಯಾನ್ಸ್' ಸ್ಪರ್ಧೆಯ ಕಾರ್ಯಕ್ರಮದಲ್ಲಿ ದೀಕ್ಷಾ ರೈ ಪ್ರದರ್ಶಿಸಿದ ಡ್ಯಾನ್ಸ್ ಗೆ ಮಾರುಹೋಗಿದ್ದ ಪುನೀತ್ ಅವರು ಬಳಿಕದ ದಿನಗಳಲ್ಲಿ ದೀಕ್ಷಾ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಕನ್ನಡದ ಕೋಟ್ಯಾಧಿಪತಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಪ್ರಶ್ನೆ ಕೇಳುವ ಅವಕಾಶವೂ ದೀಕ್ಷಾ ರೈಗೆ ಲಭಿಸಿತ್ತು. ಪ್ರಶ್ನೆ ಕೇಳುವ ಸಂದರ್ಭದಲ್ಲಿ ತಡವರಿಸಿದ ದೀಕ್ಷಾಳಿಗೆ ಧೈರ್ಯ ತುಂಬಿ ಕಾರ್ಯಕ್ರಮವನ್ನು ಮುಂದುವರಿಸಿದ್ದ ಪುನೀತ್ ರಾಜ್‍ಕುಮಾರ್ ಅವರನ್ನು ದೀಕ್ಷಾ ನೆನಪಿಸಿಕೊಳ್ಳುತ್ತಾರೆ. ಅಲ್ಲದೆ ದೀಕ್ಷಾ ಅವರ ಡ್ಯಾನ್ಸ್ ನ್ನು ಮೆಚ್ಚಿಕೊಂಡಿದ್ದ ಪುನೀತ್ ಅವರು ದೀಕ್ಷಾಳ ಡ್ಯಾನ್ಸ್ ನ ಒಂದು ಸ್ಪೆಪ್ ಅನ್ನು ತಾನು ತನ್ನ ಮುಂದಿನ ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತೇನೆ ಎಂದೂ ತಿಳಿಸಿದ್ದರಂತೆ.

ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರ ಚಿತ್ರೀಕರಣದ ವೇಳೆಯಲ್ಲಿ ದೀಕ್ಷಾ ತನ್ನ ಸಹಪಾಠಿಗಳ ಜೊತೆಗೆ ಪುನೀತ್ ಅವರನ್ನು ಬೇಟಿಯಾಗಿದ್ದರು. ತನ್ನ ಬಿಡುವಿಲ್ಲದ ಕೆಲಸದ ನಡುವೆಯೂ ದೀಕ್ಷಾ ಹಾಗೂ ಆಕೆಯ ಸಹಪಾಠಿಗಳಿಗೆ ಸಮಯ ನೀಡಿ ಎಲ್ಲರಲ್ಲೂ ಅತ್ಮೀಯವಾಗಿ ಬೆರೆತಿದ್ದರಂತೆ. ಇಂದು ಪುತ್ತೂರಿನ ಸುಧಾನ ಶಾಲೆಯಲ್ಲಿ ಬಾಲಕಿ ದೀಕ್ಷಾ ಅವರನ್ನು ಭೇಟಿಯಾದಾಗ ಈ ಎಲ್ಲಾ ವಿಚಾರಗಳನ್ನು ತಿಳಿಸಿ ದೀಕ್ಷಾ ದು:ಖಿತರಾದರು.
ಬಾಲ್ಯದಲ್ಲಿ ತಂದೆ ರಾಜ್‍ಕುಮಾರ್ ಅವರೊಂದಿಗೆ ಪುತ್ತೂರಿನ ಕಲ್ಲಾರೆ ಗುರುರಾಘವೇಂದ್ರ ಮಠಕ್ಕೆ ಪುನೀತ್ ಭೇಟಿ ನೀಡಿದ್ದರು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.








