ಇಂಧನ ಬೆಲೆ ಏರಿಕೆಯಿಂದ 4-5 ಉದ್ಯಮಿಗಳಿಗೆ ಲಾಭ: ರಾಹುಲ್ ಗಾಂಧಿ
"ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದರದಲ್ಲಿ ಇಂಧನಕ್ಕೆ ತೆರಿಗೆ ವಿಧಿಸುತ್ತಿದೆ"

ಹೊಸದಿಲ್ಲಿ: ಇಂಧನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ)ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಚ್ಚಾ ತೈಲ ಬೆಲೆಗಳು ತುಂಬಾ ಹೆಚ್ಚಾಗಿತ್ತು ಹಾಗೂ ಇಂದು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಕಡಿಮೆಯಾಗಿದ್ದರೂ ಜನರಿಗೆ ಹೆಚ್ಚು ಪಾವತಿಸಲು ಒತ್ತಾಯಿಸಲಾಗುತ್ತಿದೆ ಎಂದು ಅವರು ಬೆಟ್ಟು ಮಾಡಿದರು.
"ಯುಪಿಎ ಸರಕಾರದ ಅವಧಿಯಲ್ಲಿ ಅಂತರ್ ರಾಷ್ಟ್ರೀಯ ಇಂಧನ ಬೆಲೆ ಪ್ರತಿ ಬ್ಯಾರೆಲ್‌ಗೆ 140 ಡಾಲರ್‌ಗೆ ತಲುಪಿತ್ತು. ಇಂದು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತುಂಬಾ ಕಡಿಮೆಯಾಗಿವೆ. ಆದರೆ ನೀವು ಹೆಚ್ಚು ಪಾವತಿಸುತ್ತೀರಿ. ಇಂದು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ದರದಲ್ಲಿ ಇಂಧನಕ್ಕೆ ತೆರಿಗೆ ವಿಧಿಸುತ್ತಿದೆ. ನೀವು ಎಚ್ಚರಿಕೆಯಿಂದ ನೋಡಿದರೆ 4-5 ಉದ್ಯಮಿಗಳು ಇದರಿಂದ ಲಾಭ ಪಡೆಯುತ್ತಿದ್ದಾರೆ'' ಎಂದು ಅವರು ಉಲ್ಲೇಖಿಸಿದ್ದಾರೆಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಕರಾವಳಿ ರಾಜ್ಯ ಗೋವಾಕ್ಕೆ ಒಂದು ದಿನದ ಪ್ರವಾಸದಲ್ಲಿದ್ದಾರೆ.





