ಕಾಂಗ್ರೆಸ್ ಇಲ್ಲದೆ ಕೇಂದ್ರದಲ್ಲಿ ಯಾವುದೇ ಸರಕಾರ ರಚನೆ ಸಾಧ್ಯವಿಲ್ಲ: ಶಿವಸೇನೆಯ ಸಂಜಯ್ ರಾವತ್

ಪುಣೆ: ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ ಸಂಸದ ಸಂಜಯ್ ರಾವತ್ 2024ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಏಕಪಕ್ಷೀಯ ಸರಕಾರದ ಆಡಳಿತ ಅಂತ್ಯವಾಗಲಿದ್ದು, ಕಾಂಗ್ರೆಸ್ ಪ್ರಮುಖ ಪಕ್ಷವಾಗಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಪುಣೆ ಪ್ರೆಸ್‌ಕ್ಲಬ್ ಆಯೋಜಿಸಿದ್ದ ಜೆಎಸ್ ಕರಂಡಿಕರ್ ಸ್ಮಾರಕ ಉಪನ್ಯಾಸವನ್ನು ಉದ್ದೇಶಿಸಿ ಮಾತನಾಡಿದ ರಾವತ್ "ಕಾಂಗ್ರೆಸ್ ಇಲ್ಲದೆ ಯಾವುದೇ ಸರಕಾರ ರಚಿಸಲಾಗುವುದಿಲ್ಲ. ಇದು ದೇಶದಲ್ಲಿ ಪ್ರಮುಖ ಹಾಗೂ ಆಳವಾಗಿ ಬೇರೂರಿರುವ ಪಕ್ಷವಾಗಿದೆ. ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದೆ. ಉಳಿದವು ಪ್ರಾದೇಶಿಕ ಪಕ್ಷಗಳಾಗಿವೆ'' ಎಂದರು.
ಬಿಜೆಪಿ ಹಲವು ದಶಕಗಳ ಕಾಲ ಅಧಿಕಾರದಲ್ಲಿ ಉಳಿಯುತ್ತದೆ ಎಂಬ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ವರದಿಯ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ರಾವತ್ ಅವರು ಬಿಜೆಪಿ ಭಾರತೀಯ ರಾಜಕೀಯದಲ್ಲಿ ಉಳಿಯುತ್ತದೆ. ಆದರೆ ಅದು ವಿರೋಧ ಪಕ್ಷವಾಗಿ ಉಳಿಯುತ್ತದೆ ಎಂದು ಹೇಳಿದರು.
"ಬಿಜೆಪಿ ತಾನು ವಿಶ್ವದ ಅತಿದೊಡ್ಡ ಪಕ್ಷ ಎಂದು ಹೇಳಿಕೊಳ್ಳುತ್ತದೆ. ವಿಶ್ವದ ಅತಿದೊಡ್ಡ ಪಕ್ಷ ಚುನಾವಣೆಯಲ್ಲಿ ಸೋತರೆ ಅದು ವಿರೋಧ ಪಕ್ಷವಾಗುತ್ತದೆ. ಇದಕ್ಕೆ ಉದಾಹರಣೆ ಮಹಾರಾಷ್ಟ್ರ. ಇಲ್ಲಿ ಬಿಜೆಪಿ 105 ಶಾಸಕರನ್ನು ಹೊಂದಿರುವ ಪ್ರಮುಖ ವಿರೋಧ ಪಕ್ಷವಾಗಿದೆ" ಎಂದು ಅವರು ಹೇಳಿದರು.