ಮನಪಾ ಸಾಮಾನ್ಯ ಸಭೆ: ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾದ ತ್ಯಾಜ್ಯ ಸಮಸ್ಯೆ

ಮಂಗಳೂರು, ಅ.30: ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತಂತೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ಚರ್ಚೆಯು ವಾಗ್ವಾದಕ್ಕೆ ಕಾರಣವಾಗಿ, ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿಯೇ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತಂತೆ ಮೇಯರ್ ಪ್ರೇಮಾನಂದ ಶೆಟ್ಟಿ ವಿಷಯ ಪ್ರಸ್ತಾಪಿಸಿ ಮಾತನಾಡಿದರು.
ವಸತಿ ಕಟ್ಟಡಗಳ ಫ್ಲಾಟ್‌ಗಳವರು ತಮ್ಮ ಸ್ಥಳದಲ್ಲಿಯೇ ತ್ಯಾಜ್ಯ ಸಂಸ್ಕರಿಸುವ ನಿಟ್ಟಿನಲ್ಲಿ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ಹಂತ ಹಂತವಾಗಿ ದಂಡ ಹಾಕುವುದಾಗಿ ಸೂಚಿಸಲಾಗಿತ್ತು. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸಂಸ್ಕರಣಾ ಘಟಕಗಳನ್ನು ಅಳವಡಿಸಲಾಗಿದೆ. ಕೆಲವು ಅಪಾರ್ಟ್‌ಮೆಂಟ್‌ಗಳ ಪ್ರತಿನಿಧಿಗಳಲ್ಲಿ ಯಾವ ರೀತಿ ಮಾಡಬೇಕೆಂಬ ಗೊಂದಲ ಇನ್ನೂ ಇದ್ದು, ಸಂಸ್ಕರಣೆ ಕುರಿತಾದ ತಂತ್ರಜ್ಞಾನದ ಮಾಹಿತಿ ನೀಡುವ ಕಾರ್ಯಾಗಾರ ಮಾಡಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ದಂಡನಾ ಶುಲ್ಕಕ್ಕೆ ತಾತ್ಕಾಲಿಕ ತಡೆಗೆ ನಿರ್ಧರಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸದಸ್ಯ ವಿನಯರಾಜ್, ಹಸಿಕಸವನ್ನು ಗೊಬ್ಬರವಾಗಿಸುವ ರಾಮಕೃಷ್ಣ ಮಠದಿಂದ ಡಿಪಿಆರ್ ನೀಡುವುದಾಗಿ ಹೇಳಿದ್ದರು. ಅದು ಯಾವ ಹಂತದಲ್ಲಿದೆ ತಿಳಿದಿಲ್ಲ. ಹಸಿ ಕಸ ಸೂಕ್ತ ಪ್ರಮಾಣದಲ್ಲಿ ದೊರೆತಾಗ ಮಾತ್ರ ಇದು ಕಾರ್ಯಗತವಾಗಲು ಸಾಧ್ಯ. ಜನರು ಈಗಾಗಲೇ ತ್ಯಾಜ್ಯ ವಿಲೇವಾರಿಗಾಗಿ ತೆರಿಗೆ ಕಟ್ಟುತ್ತಿದ್ದಾರೆ. ಒಟ್ಟಿನಲ್ಲಿ ಮನಪಾ ಆಡಳಿತ ಗೊಂದಲದಲ್ಲಿದೆ ಎಂದು ಆರೋಪಿಸಿದರು.
ಸದಸ್ಯ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಆ್ಯಂಟನಿ ಸಂಸ್ಥೆಯ 12 ವಾಹನಗಳು ಗ್ಯಾರೇಜ್‌ನಲ್ಲಿದೆ. ಇದರಿಂದ ವಾರ್ಡ್‌ಗಳಲ್ಲಿ ಪ್ರತೀ ದಿನ ಕಸ ಸಂಗ್ರಹ ಆಗುತ್ತಿಲ್ಲ. ಪಾಲಿಕೆ ಸದಸ್ಯ ನವೀನ್ ಡಿಸೋಜಾ, ಶಶಿಧರ ಹೆಗ್ಡೆ ಅವರು ಮಾತನಾಡಿ ತ್ಯಾಜ್ಯ ವಿಲೇ ಗೊಂದಲ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಆ್ಯಂಟನಿ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದ್ದು, ಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷದ ಸದಸ್ಯರು ಈ ಹಿಂದೆ ಹೇಳಿದ್ದರು ಎಂದಾಗ, ನಿಮ್ಮ ಆಡಳಿತ ವೈಪಲ್ಯವನ್ನು ಪ್ರತಿಪಕ್ಷದ ಮೇಲೆ ಹಾಕಬೇಡಿ ಎಂದು ವಿನಯ ರಾಜ್ ಪ್ರತಿಕ್ರಿಯಿಸಿದರು.
ನಿಮ್ಮ ಆಡಳಿತ ಹೇಗಿತ್ತು ಎಂಬುದು ಗೊತ್ತಿದೆ. ಹಾಗಾಗಿಯೇ 36 ಸದಸ್ಯರಿಂದ ನಿಮ್ಮ ಸಂಖ್ಯೆ 14ಕ್ಕೆ ಇಳಿಕೆಯಾಗಿದ್ದು ಎಂದು ಸುಧೀರ್ ಶೆಟ್ಟಿ ಕಣ್ಣೂರು ಹೇಳಿಕೆ ವಿಪಕ್ಷ ಸದಸ್ಯರನ್ನು ಕೆರಳಿಸಿತು. ಸದನದಲ್ಲಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ವಿಪಕ್ಷವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳುತ್ತಾ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಪ್ರತಿಭಟಿಸಿದರು.
ಮೇಯರ್ ಮಾತನಾಡಿ, ಪ್ರತಿಪಕ್ಷದ ಸದಸ್ಯರು ಪೂರ್ವ ಯೋಜಿತವಾಗಿ ಸದನಕ್ಕೆ ಬಂದಂತೆ ಕಾಣುತ್ತಿದೆ. ಘನತ್ಯಾಜ್ಯ ನಿರ್ವಹಣೆ ಸದ್ಯ ಸುಧಾರಣೆಯಾಗಿದೆ. ವೆಜ್ಞಾನಿಕ ಕಸ ವಿಲೇವಾರಿಗೆ ಮನಪಾ ದೊಡ್ಡ ಹೆಜ್ಜೆ ಇರಿಸಿದೆ. ಸಾರ್ವಜನಿಕರು ಕೂಡ ಸಹಕಾರ ನೀಡುತ್ತಿದ್ದಾರೆ. ಬ್ಲ್ಯಾಕ್‌ಸ್ಪಾಟ್ ಗುರುತಿಸಿ, ಸಿ.ಸಿ. ಕ್ಯಾಮಾರಾ ಅಳವಡಿಸುವ ಕೆಲಸ ನಡೆಯುತ್ತಿದೆ. ಆದರೂ, ಕೆಲವು ಕಡೆಗಳಲ್ಲಿ ಪ್ರತೀ ದಿನ ಕನ ವಿಲೇವಾರಿ ನಡೆಯುತ್ತಿಲ್ಲ ಎಂಬ ಆರೋಪ ಬಂದರೆ, ಮುಂದಿನ ದಿನಗಳಲ್ಲಿ ವಾರ್ಡ್ ಮಟ್ಟದಲ್ಲಿ ಪ್ರತ್ಯೇಕ ಸಭೆ ಕರೆಯುವುದಾಗಿ ಹೇಳಿದರು.
ಎಲ್‌ಇಡಿ ಲೈಟ್ ಅಳವಡಿಕೆ: ಗೊಂದಲ
ಮನಪಾ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ ಮಾತನಾಡಿ, ನಗರದಲ್ಲಿ ಈಗಿರುವ ಬೀದಿ ದೀಪವನ್ನು ಎಲ್‌ಇಡಿ ಬಲ್ಭ್ ಆಗಿ ಪರಿವರ್ತನೆ ಮಾಡಲಾಗುತ್ತಿದ್ದು, ಕೆಲವೊಂದು ಕಡೆ ಮಂದವಾಗಿ ಉರಿಯುತ್ತಿದೆ. 24 ವ್ಯಾಟ್ ಬಲ್ಭ್ ಅಳವಡಿಸುವ ಕಡೆ 20 ವ್ಯಾಟ್ ಬಲ್ಭ್ ಅಳವಡಿಸಿದ್ದಾರೆ. ಎಲ್‌ಇಡಿ ಬಲ್ಭ್ ವಿಚಾರದಲ್ಲಿ ಗೊಂದಲ ನಿರ್ಮಾಣವಾಗಿದೆ ಎಂದರು.
ಆಯುಕ್ತ ಅಕ್ಷಿ ಶ್ರೀಧರ್ ಮಾತನಾಡಿ, ನಗರದಲ್ಲಿ ಅಕ್ಟೋಬರ್ ಅಂತ್ಯಕ್ಕೆ 40,000 ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವಂತೆ ಹೇಳಿತ್ತಾದರೂ ಈವರೆಗೆ 6842 ಎಲ್‌ಇಡಿ ಬಲ್ಭ್ ಅಳವಡಿಸಲಾಗಿದೆ. ನಿಗದಿತ ಗುರಿ ತಲುಪಿಲ್ಲ. ಈ ಕುರಿತು ಉತ್ತರ ನೀಡುವಂತೆ ಸಂಬಂಧಪಟ್ಟ ಸಂಸ್ಥೆಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಲಾಗಿದೆ. ಗುತ್ತಿಗೆ ನಿರ್ವಹಿಸುತ್ತಿರುವ ಮೂರೂ ಸಂಸ್ಥೆಯ ಮುಖ್ಯಸ್ಥರು ಸಭೆಗೆ ಬರಬೇಕು ಎಂದು ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ವಾರ್ಡ್‌ಗಳಲ್ಲಿ ನಿಗದಿತ ವ್ಯಾಟ್‌ಗಿಂತ ಕಡಿಮೆ ವ್ಯಾಟ್ ಸಾಮರ್ಥ್ಯದ ಬಲ್ಭ್ ಅಳವಡಿಸಿದ ಕುರಿತು ಅವರ ಬಳಿ ಸೂಕ್ತ ಉತ್ತರ ಪಡೆಯಲಾಗುವುದು ಎಂದರು.
ನಗರದ ಒಳ ರಸ್ತೆಗಳ ಅವ್ಯವಸ್ಥೆ ಕುರಿತಂತೆ ಮಾಜಿ ಮೇಯರ್ ಶಶಿಧರ ಹೆಗ್ಡೆ ಅವರ ಪ್ರಶ್ನೆಗೆ ಉತ್ತರಿಸಿದ ಮೇಯರ್, ಒಳ ರಸ್ತೆಗಳ ಅವ್ಯವಸ್ಥೆ, ರಸ್ತೆ ಗುಂಡಿ ಬಿದ್ದ ವಿಚಾರಕ್ಕೆ ಸಂಬಧಿಸಿ ಕಳೆದ ಕೆಲ ದಿನಗಳಿಂದ ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿದ್ದೇನೆ. ಎಲ್ಲಾ ವರದಿಯನ್ನು ಸಂಗ್ರಹಿಸಿದ್ದು, ಆಯಾ ವಾರ್ಡ್‌ಗೆ ಸಂಬಂಧಪಟ್ಟ ಮನಪಾ ಸದಸ್ಯರು, ಇಂಜಿನಿಯರ್ ಅವರ ಬಳಿ ಮಾಹಿತಿ ಪಡೆದಿದ್ದೇನೆ. ಆಡಳಿತಾತ್ಮಕ ಸುಧಾರಣೆಯ ನಿಟ್ಟಿನಲ್ಲಿ ಪತ್ರಿಕೆ ಉತ್ತಮ ಕೆಲಸ ಮಾಡುತ್ತಿದೆ. ಕೆಲವೊಂದು ವಾರ್ಡ್‌ಗಳಲ್ಲಿ ಸ್ಮಾರ್ಟ್‌ಸಿಟಿ, ಮನಪಾದಿಂದ ಕಾಮಗಾರಿ ನಡೆಯುತ್ತಿದೆ. ಮುಖ್ಯ ರಸ್ತೆಗಳ ಜೊತೆ ಒಳ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಪಾಲಿಕೆ ಸಾಮಾನ್ಯ ಅನುದಾನದ ಎರಡನೇ ಹಂತದ ಹಣ ಬಿಡುಗಡೆ ಕುರಿತಂತೆ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪಾಲಿಕೆಯ ಎರಡು ಸಾಮಾನ್ಯ ಸಭೆಯೊಳಗೆ ಅಂತಿಮಗೊಳಿಸುವುದಾಗಿ ಸಭೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್, ಸೋಭಾ ರಾಜೇಶ್, ಲೀಲಾವತಿ ಉಪಸ್ಥಿತರಿದ್ದರು.














