ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿಸುವಂತೆ ಸಿಎಂಗೆ ಕಿಸಾನ್ ಕಾಂಗ್ರೆಸ್ ಮನವಿ
ಉಡುಪಿ, ಅ.30: ಜಿಲ್ಲೆಯಲ್ಲಿ ಈ ಬಾರಿ ಅಕಾಲಿಕ ಮಳೆಯಿಂದಾಗಿ ರೈತರು ಈಗಾಗಲೇ ಕಂಗಾಲಾಗಿದ್ದು, ಇದರೊಂದಿಗೆ ಕಟಾವು ಯಂತ್ರದ ದುಪ್ಪಟ್ಟು ದರದಿಂದ ರೈತರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಭತ್ತಕ್ಕೆ ಬೆಂಬಲ ಬೆಲೆಯನ್ನು ಘೋಷಿಸಿ ರೈತರ ನೆರವಿಗೆ ಬರಬೇಕು ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ವಿಳಂಬವಾಗಿ ಬೆಂಬಲ ಬೆಲೆ ಘೋಷಣೆ ಮಾಡಿದರೆ ಇದರ ಪ್ರಯೋಜನ ರೈತರಿಗೆ ಸಿಗದೇ ಅದು ಮಧ್ಯವರ್ತಿಗಳು ಹಾಗೂ ರೈಸ್ ಮಿಲ್ ಮಾಲಕರಿಗೆ ನೀಡಿದಂತಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್ಲೂರು ಶಶಿಧರ್ ಶೆಟ್ಟಿ ಮನವಿ ಮಾಡಿದ್ದಾರೆ.
ಮಾತ್ರವಲ್ಲದೆ ಈ ಖಾಸಗಿ ಕಟಾವು ಯಂತ್ರದ ದರವನ್ನು ಸರಕಾರಿ ಯಂತ್ರಗಳ ದರದಷ್ಟೇ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕೆಂದು ಅವರು ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
Next Story





