ಉಡುಪಿ ಜಿಲ್ಲೆಯಲ್ಲಿ ನ.11ರವರೆಗೆ ರಾತ್ರಿ ಕರ್ಫ್ಯೂ ಮುಂದುವರಿಕೆ
ಉಡುಪಿ, ಅ.30: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರದ ಆದೇಶವನ್ನು ಆಧರಿಸಿ ರಾತ್ರಿ ಕರ್ಫ್ಯೂ ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ವಿಧಿಸಲಾಗಿದ್ದ ಕೆಲವು ಮಾರ್ಗಸೂಚಿ/ನಿಬಂಧನೆಗಳನ್ನು ಇದೀಗ ನ.11ರವರೆಗೆ ಮುಂದುವರಿಸಿ ಪ್ರಭಾರ ಜಿಲ್ಲಾಧಿಕಾರಿ ಡಾ.ನವೀನ್ ಭಟ್ ಇಂದು ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇದ್ದರೂ, ಸರಕಾರದ ಆದೇಶ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ವರದಿ ಹಾಗೂ ಜಿಲ್ಲೆಯ ಪ್ರಸ್ತುತ ವಿದ್ಯಾಮಾನಗಳನ್ನು ಪರಿಗಣಿಸಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿಆರ್‌ಪಿಸಿ ಸೆಕ್ಷನ್ 144(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಂದಿನ ಆದೇಶದವರೆಗೆ ಪರಿಷ್ಕೃತ ಆದೇಶ ಹೊರಡಿಸಿರುವುದಾಗಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ನ.11ರವರೆಗೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಮುಂದುವರಿಯಲಿದ್ದು, ಪ್ರತಿ ದಿನ ರಾತ್ರಿ 10:00ರಿಂದ ಬೆಳಗ್ಗೆ 5:00ರವರೆಗೆ ಇದು ಮಾರ್ಗಸೂಚಿಯಂತೆ ಕಟ್ಟು ನಿಟ್ಟಾಗಿ ಜಾರಿಯಲ್ಲಿರುತ್ತದೆ. ಪಬ್‌ಗಳನ್ನು ಕೋವಿಡ್-19 ಸೂಕ್ತ ನಡವಳಿಕೆ ಹಾಗೂ ಕೋವಿಡ್ ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸುವ ಷರತ್ತಿ ನೊಂದಿಗೆ ತೆರೆಯಲು ಅವಕಾಶವಿದೆ.
1ರಿಂದ 5ನೇ ತರಗತಿಯವರೆಗಿನ ತರಗತಿಯನ್ನು ಕೋವಿಡ್-19 ಸೂಕ್ತ ನಡವಳಿಕೆ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಶಿಕ್ಷಣ ಇಲಾಖೆಯಿಂದ ನೀಡಲಾದ ಎಸ್‌ಓಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸು ಷರತ್ತಿನೊಂದಿಗೆ ತೆರೆಯಲು ಅನುಮತಿ ನೀಡಲಾಗಿದೆ. ದೈಹಿಕ ತರಗತಿಗಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಮಾಸ್ಕ್, ಸ್ಕೃಿನೀಂಗ್, ಸ್ಯಾನಿಟೈಸರ್ ಬಳಕೆ, ಸುರಕ್ಷತಾ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.
ಜಿಲ್ಲೆಯಲ್ಲಿ 6ರಿಂದ 12ನೇ ತರಗತಿಗಳು ವಾರದ 5 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲು ಅನುಮತಿ ಇದೆ. ಇಂತಹ ಶಾಲೆಗಳಲ್ಲಿ ಶನಿವಾರ ಮತ್ತು ರವಿವಾರಗಳಂದು ತೀವ್ರತರವಾದ ನೈರ್ಮಲ್ಯವನ್ನು ಕೈಗೊಳ್ಳಬೇಕು. ಸ್ಪರ್ಧಾತ್ಮಕ ತರಬೇತಿಗಳಿಗೆ ಮಾತ್ರ ಈಜುಕೊಳಗಳನ್ನು ತೆರೆಯಲು ಅನುಮತಿ ಇದೆ. ಅದೇ ರೀತಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಮಾತ್ರ ಕ್ರೀಡಾ ಸಂಕೀರ್ಣಗಳನ್ನು ಹಾಗೂ ಸ್ಟೇಡಿಯಂಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ರೋಗಿಗಳು ಹಾಗೂ ಅವರೊಂದಿಗಿರುವ ಪರಿಚಾರಕರು ತುರ್ತು ಅಗತ್ಯತೆಗಾಗಿ ವ್ಯಕ್ತಿಗಳನ್ನು ಸ್ಥಳಾಂತರಿಸಲು ಅನುಮತಿ ಇದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ರಾತ್ರಿ ವೇಳೆ ಕಾರ್ಯಾಚರಿಸಲು ಅನುಮತಿ ಇದೆ. ಇದಕ್ಕೆ ಸೂಕ್ತ ಗುರುತಿನ ಚೀಟಿ, ಅನುಮತಿ ಪತ್ರದ ದಾಖಲೆಗಳ ಅಗತ್ಯವಿದೆ.
ವೈದ್ಯಕೀಯ, ತುರ್ತು ಹಾಗೂ ಔಷಧಾಲಯಗಳನ್ನು ಒಳಗೊಂಡು ಅಗತ್ಯ ಸೇವೆಗಳು ಯಥಾ ರೀತಿಯಲ್ಲಿ ಎಲ್ಲಾ ನಿಯಮಗಳ ಪಾಲನೆಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ಇದ್ದರೂ, ಇತರ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ವಿಧಿಸಲಾಗಿದೆ. ಸರಕು ಸಾಗಿಸುವ ಟ್ರಕ್, ಸರಕು ವಾಹನಗಳ ಒಡಾಟಕ್ಕೆ ಅವಕಾಶವಿದೆ.
ಬಸ್, ರೈಲು, ವಿಮಾನಗಳ ಪ್ರಯಾಣಕ್ಕೆ ಅನುಮತಿ ಇದ್ದು, ಈ ಹಿನ್ನೆಲೆ ಯಲ್ಲಿ ಆಯಾ ನಿಲ್ದಾಣಗಳಿಗೆ ತೆರಳಲು ಹಾಗೂ ಅಲ್ಲಿಂದ ಬರಲು ವಾಹನಗಳನ್ನು ಬಳಕೆಗೆ ಅವಕಾಶವಿದೆ. ಆದರೆ ಸೂಕ್ತ ಪ್ರಯಾಣ ದಾಖಲೆ, ಟಿಕೇಟಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.
ಸಿನಿಮಾ ಹಾಲ್‌ಗಳು, ಮಲ್ಟಿಫ್ಲೆಕ್ಸ್‌ಗಳು, ಚಿತ್ರಮಂದಿರಗಳು, ರಂಗಮಂದಿರಗಳು, ಸಭಾಂಗಣಗಳು ಹಾಗೂ ಅಂತಹದೇ ರೀತಿಯ ಸ್ಥಳಗಳಲ್ಲಿ ಶೇ.100ರಷ್ಟು ಆಸನ ಸಾಮರ್ಥ್ಯಗಳೊಂದಿಗೆ ಮೇಲಿನ ಎಲ್ಲಾ ಷರತ್ತಿನ ಪಾಲನೆಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಮದುವೆ, ಕೌಟುಂಬಿಕ ಶುಭ ಸಮಾರಂಭಗಳನ್ನು 400 ಮಂದಿ ಮೀರದಂತೆ ನಡೆಸಲು ಅನುಮತಿ ಇದೆ. ಇದಕ್ಕಾಗಿ ತಹಶೀಲ್ದಾರ್‌ರಿಂದ ಸೂಕ್ತ ಅನುಮತಿ ಪಡೆದಿರಬೇಕು. ಎಲ್ಲಾ 400 ಮಂದಿಗೂ ಪಾಸ್‌ಗಳನ್ನು ಪಡೆದಿರಬೇಕು. ಸಮಾರಂಭದಲ್ಲಿ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ದೇವಾಲಯ, ಮಸೀದಿ, ಚರ್ಚ್ ಹಾಗೂ ಇತರ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ಇದೆ. ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವುದರೊಂದಿಗೆ, ಸಂಬಂಧಪಟ್ಟ ಇಲಾಖೆ ಹೊರಡಿಸಿ ಎಸ್‌ಓಪಿಯನ್ನು ಪಾಲಿಸಬೇಕಾಗುತ್ತದೆ. ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಚಟುವಟಿಕೆಗೆ ಮಾತ್ರ ಅವಕಾಶವಿದ್ದು, ಅಲ್ಲಿ ಜಾತ್ರೆಗಳು, ಉತ್ಸವಗಳು, ಹಬ್ಬ, ಮೆರವಣಿಗೆ ನಡೆಸಲು ಅವಕಾಶವಿಲ್ಲ.
ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರ ಸಭೆ ಸಮಾರಂಭಗಳು ಹಾಗೂ ಸಾರ್ವಜನಿಕರು ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ. ಸಾರಿಗೆ, ಅಂಗಡಿಗಳು, ರೆಸ್ಟೋರೆಂಟ್, ಮಾಲ್, ಖಾಸಗಿ ಕಚೇರಿ ಸೇರಿದಂತೆ ಉಳಿದೆಲ್ಲಾ ವಿಷಯಗಳಲ್ಲಿ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.







