ಶತಮಾನೋತ್ಸವಕ್ಕೆ ಆರೆಸ್ಸೆಸ್ ಇನ್ನಷ್ಟು ವಿಸ್ತಾರ: ದತ್ತಾತ್ರೇಯ ಹೊಸಬಾಳೆ

ಧಾರವಾಡ, ಅ.30: ‘ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವು 2025ಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಆ ಹೊತ್ತಿಗೆ ದೇಶದ ಪ್ರತಿ ಮಂಡಳಕ್ಕೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಆರೆಸ್ಸೆಸ್‍ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಧಾರವಾಡದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಬೈಠಕ್‍ನ ಕೊನೆಯ ದಿನವಾದ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಭಾರತ, ಪೂರ್ವ ರಾಜ್ಯಗಳು ಸೇರಿ ಕೆಲವೆಡೆ ಸಂಘದ ಕಾರ್ಯಚಟುವಟಿಕೆ ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ದೇಶದಲ್ಲಿರುವ 6,483 ಮಂಡಳಗಳಲ್ಲಿ ಈವರೆಗೂ 5,683 ಮಂಡಳವನ್ನು ಆರೆಸ್ಸೆಸ್ ತಲುಪಿದೆ. ನಾಗಾಲ್ಯಾಂಡ್, ಲಕ್ಷದ್ವೀಪ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಖೆಗಳನ್ನು ತೆರೆಯಲು ಈವರೆಗೂ ಹಲವು ತೊಡಕುಗಳು ಇದ್ದವು. ಈಗ ಹಂತಹಂತವಾಗಿ ಸಂಘವು ಅಲ್ಲಿಯೂ ತನ್ನ ಕಾರ್ಯವನ್ನು ವಿಸ್ತರಿಸಲಿದೆ’ ಎಂದರು.
ಪರಿಸರ ಸಂರಕ್ಷಣೆ ನಿತ್ಯದ ಕ್ರಿಯೆ ಆಗಬೇಕು. ಆದರೆ ದೀಪಾವಳಿಯಲ್ಲಿ ಪಟಾಕಿ ಸಿಡಿಸಬಾರದು ಎಂಬುದು ಹಬ್ಬದ ಹೊಸ್ತಿಲಲ್ಲಿ ನಿಂತಿರುವಾಗ ಹೇಳುವುದು ಸರಿಯಲ್ಲ ಎಂದರು. ಜನಸಂಖ್ಯೆ ನಿಯಂತ್ರಣ ಹಾಗೂ ಮತಾಂತರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿ ದೇಶವೂ ಒಂದು ಏಕರೂಪ ನೀತಿಯನ್ನು ಹೊಂದುವುದು ಅನಿವಾರ್ಯ. ವೈಯಕ್ತಿಕವಾಗಿ ಧರ್ಮ ಬದಲಾಯಿಸಲು ಸಂವಿಧಾನದಲ್ಲಿ ಅವಕಾಶ ಇದ್ದೇ ಇದೆ. ಆದರೆ ಬಲವಂತದ ಮತಾಂತರ ನಿಲ್ಲಬೇಕು ಎಂದರು.
ಬಾಂಗ್ಲಾದೇಶದ ಹಿಂದೂಗಳ ಮೇಲಿನ ಹಲ್ಲೆ ನಿಯಂತ್ರಿಸುವುದು, ಅಸ್ಪೃಶ್ಯತೆ, ಸ್ವದೇಶಿ ಜಾಗೃತಿ, ಉದ್ಯೋಗ ಸೃಷ್ಟಿ, ಸ್ಥಳೀಯ ಉದ್ಯೋಗಕ್ಕೆ ಒತ್ತು, ಹೊಸ ಶಿಕ್ಷಣ ಸೇರಿದಂತೆ ಅನೇಕ ವಿಚಾರಗಳ ಕುರಿತು ಮುಂಬರುವ ದಿನಗಳಲ್ಲಿ ಇನ್ನಷ್ಟು ಬೆಳಕು ಚೆಲ್ಲಲು ಆರೆಸ್ಸೆಸ್ ಯೋಜಿಸಿದೆ. ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಪುನೀತ್ ರಾಜಕುಮಾರ್ ನಿಧನಕ್ಕೆ ಅವರು ಶೋಕ ವ್ಯಕ್ತಪಡಿಸಿದರು.
ಎಸ್ಸಿ, ಎಸ್ಟಿ ಯೋಧರ ಪರಿಚಯ
‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಪ್ಪುನೀರಿನ ಶಿಕ್ಷೆ ಪಡೆದ ವೀರ ಯೋಧರನ್ನು, ಮಹಿಳಾ ಸ್ವಾತಂತ್ರ್ಯ ಸೇನಾನಿಗಳು, ಎಸ್ಸಿ, ಎಸ್ಟಿ ಯೋಧರನ್ನು ಪರಿಚಯಿಸುವ ಮತ್ತು ಇತಿಹಾಸದ ಪುಟದಲ್ಲಿ ದಾಖಲಿಸುವ ಪ್ರಕ್ರಿಯೆ ಸಂಘದ ಮೂಲಕ ನಡೆಸಲಾಗುವುದು ಹಾಗೂ ಸಿಖ್ ಧರ್ಮದ 9ನೇ ಗುರು ತೇಜ್ ಬಹದ್ದೂರ್ ಅವರನ್ನು ಸ್ಮರಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಆರೆಸ್ಸೆಸ್‍ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.







