ಮಂಗಳೂರು: ಲಾರಿ- ಸ್ಕೂಟರ್ ಢಿಕ್ಕಿ; ಕ್ಯಾಂಪ್ಕೊ ಚಾಕೊಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತ್ಯು

ಮಂಗಳೂರು, ಅ.30: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಕ್ಯಾಂಪ್ಕೊ ಚಾಕೊಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತಪಟ್ಟ ಘಟನೆ ಶನಿವಾರ ಮರೋಳಿಯಲ್ಲಿ ಬೆಳಗ್ಗೆ 7:45ರ ಸುಮಾರಿಗೆ ನಡೆದಿದೆ. ಮೃತರನ್ನು ವಿದ್ಯಾ ಕಣ್ವತೀರ್ಥ(45) ಎಂದು ಗುರುತಿಸಲಾಗಿದೆ.
ವಿದ್ಯಾ ಬೋಂದೆಲ್‌ನಲ್ಲಿರುವ ಮನೆಯಿಂದ ತನ್ನ ಕಚೇರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಸಂದರ್ಭ ಪಡೀಲ್‌ನಲ್ಲಿ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ವಿದ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾ ಕಳೆದ ಎರಡು ವರ್ಷಗಳಿಂದ ಕ್ಯಾಂಪ್ಕೊ ಚಾಕೊಲೇಟ್ ಸಂಸ್ಥೆಯ ಕೇಂದ್ರ (ಪುತ್ತೂರು) ಕಚೇರಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಮುಂಚೆ ಕ್ಯಾಂಪ್ಕೊ ಮಂಗಳೂರು ವಿಟ್ಲ ಹಾಗೂ ಬಾಯಾರ್‌ನಲ್ಲಿ ಕೆಲಸ ನಿರ್ವಹಿಸಿದ್ದರು.
ಮೃತರು ತಂದೆ, ತಾಯಿ, ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಈ ಬಗ್ಗೆ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





