ನಮ್ಮಲ್ಲಿ ಬದಲಾವಣೆಯಾದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ: ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ

ಉಡುಪಿ: ನಮ್ಮಲ್ಲಿ ಬದಲಾವಣೆಯಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಿಸಿಕೊಳ್ಳಲು ಸಾಧ್ಯ. ವಿಚಕ್ಷಣಾ ದಳದವರು ಬಂದು ಕಾನೂನಿನ ಇಕ್ಕಟ್ಟಿಗೆ ಸಿಲುಕಿಸಿದ ನಂತರ ಬದಲಾವಣೆಯಾಗುವ ಬದಲು, ಭ್ರಷ್ಠಾಚಾರ ವಿರುದ್ದ ಪ್ರತಿಜ್ಞೆ ಮಾಡಿರುವುದನ್ನು ಸ್ವಯಂ ಅನುಸರಿಸಿ, ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ದ ದ.ಕ. ಮತ್ತು ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕ ಎ. ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿಯ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಶುಕ್ರವಾರ ಲೋಕಾಯಕ್ತರಿಂದ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ವಿಚಕ್ಷಣಾ ಆಯೋಗದ ವತಿಯಿಂದ ಪ್ರತಿ ವರ್ಷ ಅಕ್ಟೋಬರ್ 26 ರಿಂದ ನವೆಂಬರ್ 1ರವರೆಗೆ ಭ್ರಷ್ಠಾಚಾರ ನಿರ್ಮೂಲನ ಜಾಗೃತಿ/ಅರಿವು ಸಪ್ತಾಹ ಆಚರಣೆ ಮಾಡಲಾಗುತ್ತಿದೆ. ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶವೇ ಪ್ರತಿ ಇಲಾಖೆಯಲ್ಲಿ ಕಾರ್ಯ ನಿರ್ವಸುವ ಕಛೇರಿ ಸಿಬ್ಬಂದಿ ಮತ್ತು ಸೇವೆ ಪಡೆದುಕೊಳ್ಳುವ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹದ್ದು. ಎಲ್ಲಾ ಸಂಸ್ಥೆಗಳು, ಕಛೇರಿಗಳು, ಸಾರ್ವಜನಿಕ ಸಂಸ್ಥೆಗಳು, ಸ್ವಯಂಸೇವಕ ಸಂಸ್ಥೆಗಳು, ಸಮುದಾಯಗಳು ಒಗ್ಗಟ್ಟಾಗಿ ಪ್ರತಿಜ್ಞಾ ಬದ್ಧರಾಗಿ ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂದು ಅವರು ಹೇಳಿದರು.
ಸಾರಿಗೆ ಕಚೇರಿಯ ಅಧೀಕ್ಷಕಿ ಗೀತಾ ಸಾರಿಗೆ ವಿಭಾಗ ಕಾರ್ಯಗಳ ಬಗ್ಗೆ, ಪಮಿತಾ ಸಾರಿಗೆಯೇತರ ವಿಭಾಗದ ಕಾರ್ಯಗಳ ಬಗ್ಗೆ , ಸರಸ್ವತಿ ಇತರ ವಿಭಾಗದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಅದೇ ರೀತಿ ಕಾರ್ಮಿಕ ಅಧಿಕಾರಿ ಕುಮಾರ್ ಕಾರ್ಮಿಕ ಇಲಾಖೆ ಸೌಲಭ್ಯಗಳ ಬಗ್ಗೆ, ಸುಗುಣ ಹಿಂದುಳಿದ ವರ್ಗಗಳ ಇಲಾಖೆ ಸೌಲಭ್ಯಗಳ ಬಗ್ಗೆ, ಅನಿತಾ ಗಣಿ ಇಲಾಖೆಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಮತ್ತು ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಗಣಿ ಇಲಾಖೆಯ ಸಿಬ್ಬಂದಿಗಳು, ಚಾಲನ ತರಬೇತಿ ಶಾಲೆಯವರು, ಅಭ್ಯರ್ಥಿಗಳು, ಸಾರ್ವಜನಿಕರು, ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೋಟಾರು ವಾಹನ ನಿರೀಕ್ಷಕ ಎನ್.ವಿಶ್ವಾಥ ನಾಯ್ಕ ಸ್ವಾಗತಿಸಿ, ವಂದಿಸಿದರು.








