ಉಡುಪಿ: ಮೀನುಗಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ, ಅ.30: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ, ಮೀನುಗಾರಿಕಾ ಇಲಾಖೆ ಮತ್ತು ಅಳ ಸಮುದ್ರ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಮಲ್ಪೆ ಬಂದರು ಹಾಗೂ ಸಮುದಾಯ ದಂತ ಚಿಕಿತ್ಸಾ ವಿಭಾಗ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಮೀನುಗಾರರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಮಲ್ಪೆಯ ಏಳೂರು ಸಭಾಭವನದಲ್ಲಿ ಇಂದು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ತಂಬಾಕು, ರಕ್ತದೊತ್ತಡ, ಮಧುಮೇಹ, ಕ್ಷಯರೋಗ ಪತ್ತೆ ಪರೀಕ್ಷೆ, ಐಸಿಟಿಸಿ ಪರೀಕ್ಷೆ, ದಂತಚಿಕಿತ್ಸೆ, ಮಲೇರಿಯಾ, ಡೆಂಗೆ, ಮದ್ಯಪಾನ ಮತ್ತು ಮಾನಸಿಕ ರೋಗಗಳ ಸಮಸ್ಯೆಗಳ ಕುರಿತು ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ ಮತ್ತು ಮಾಹಿತಿ ಶಿಬಿರವನ್ನು ನಡೆಸಲಾಯಿತು.
ಶಿಬಿರದಲ್ಲಿ ಒಟ್ಟು 160 ಫಲಾನುಭವಿಗಳು ಭಾಗವಹಿಸಿದ್ದು ಶಿಬಿರದ ಸದುಪ ಯೋಗವನ್ನು ಪಡೆದುಕೊಂಡರು. ತಂಬಾಕು ಚಟಕ್ಕೆ ಒಳಗಾಗಿರುವವರಿಗೆ ಆಪ್ತ ಸಮಾಲೋಚನೆಯನ್ನು ಮಾಡಿ ಸುಮಾರು 680 ನಿಕೋಟಿನ್ ಗಮ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಗಣೇಶ್, ಅಳ ಸಮುದ್ರ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಮಲ್ಪೆ ಬಂದರು ಅಧ್ಯಕ್ಷ ಕೇಶವ ಕೋಟ್ಯಾನ್, ನಿರ್ದೇಶಕ ರಾದ ಆರ್.ಸಿ.ಕುಂದರ್, ಆರ್.ಹೆಚ್ ಮೆಂಡನ್ ಮತ್ತು ಜಿ.ಲಕ್ಷ್ಮಣ್ ಸುವರ್ಣ, ಕಾರ್ಯದಶಿ ಹರಿಶ್ಚಂದ್ರ, ಮಣಿಪಾಲ ಸಮುದಾಯ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ರಾಮ್‌ಪ್ರಸಾದ್ ಮತ್ತು ಉಡುಪಿ ಎನ್‌ಟಿಸಿಪಿ ಜಿಲ್ಲಾ ಸಲಹೆಗಾರರಾದ ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.







