ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ಪೆರ್ಡೂರು ಸಾಮಾನ್ಯ ಸಭೆ ಬಹಿಷ್ಕಾರ
ದೌರ್ಜನ್ಯ ಪ್ರಕರಣದ ಆರೋಪಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆಗೆ ವಿರೋಧ

ಹಿರಿಯಡ್ಕ, ಅ.30: ಬಿಗಿ ಪೊಲೀಸ್ ಭದ್ರತೆಯಲ್ಲಿ ಪೆರ್ಡೂರು ಗ್ರಾಪಂ ಅಧ್ಯಕ್ಷ ದೇವು ಪೂಜಾರಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯನ್ನು, ಪಿಡಿಓ ಮೇಲಿನ ದಲಿತ ದೌರ್ಜನ್ಯ ಪ್ರಕರಣದ ಆರೋಪಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲ್ಲ ಎಂದು ಹೇಳಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಘೋಷಣೆಗಳನ್ನು ಕೂಗುತ್ತ ಸಭೆ ಬಹಿಷ್ಕರಿಸಿ ಹೊರ ನಡೆದರು.
ಹೆಬ್ರಿ ಮತ್ತು ಮುದ್ರಾಡಿ ಗ್ರಾಪಂನಲ್ಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿ ರುವ ಸದಾಶಿವ ಸೆರ್ವೆಗಾರ ಎಂಬವರು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸುವ ದೂರಿನ ಹಿನ್ನೆಲೆಯಲ್ಲಿ ಪೆರ್ಡೂರು ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಮನ ಕೆ. ಜು.31ರಂದು ಸ್ಥಳ ಪರೀಶೀಲನೆ ನಡೆಸಿ, ಆ.2ರಂದು ಸಂಬಂಧಪಟ್ಟವರಿಗೆ ನೋಟೀಸ್ ನೀಡಿದ್ದರು. ಹೀಗೆ ಈ ಸ್ಥಳ ಪರೀಶಿಲನೆ ನಡೆಸಿದಕ್ಕಾಗಿ ಆರೋಪಿಗಳಾದ ಬಿಜೆಪಿ ಬೆಂಬಲಿತ ಪೆರ್ಡೂರು ಗ್ರಾಪಂ ಅಧ್ಯಕ್ಷ ದೇವು ಪೂಜಾರಿ, ಸದಸ್ಯರುಗಳಾದ ತುಕಾರಾಮ್ ನಾಯಕ್, ಜಗದೀಶ ಶೆಟ್ಟಿ, ಸಚಿನ್ ಪೂಜಾರಿ ಎಂಬವರು ಪಿಡಿಓ ಜೊತೆ ಅನುಚ್ಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪಿಡಿಓ ನೀಡಿದ ದೂರಿನಂತೆ ಇವರ ವಿರುದ್ಧ ಆ.30ರಂದು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ತಿರಸ್ಕರಿಸಲಾಗಿತ್ತು. ಇದೀಗ ಇವರ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಅಧ್ಯಕ್ಷ ದೇವು ಪೂಜಾರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಸಭೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಗ್ರಾಪಂ ಕಚೇರಿ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷೆ ಚೇತನ ಶೆಟ್ಟಿ ನೇತೃತ್ವದಲ್ಲಿ 15 ಮಂದಿ ಸದಸ್ಯರು, ಪಿಡಿಓಗೆ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿ ಸಾಮಾನ್ಯ ಸಭೆ ಕರೆದಿರುವುದು ಸಂವಿಧಾನ ವಿರೋಧಿಯಾಗಿದೆ. ಈ ಸಭೆಯಲ್ಲಿ ನಾವು ಯಾರು ಕೂಡ ಭಾಗವಹಿಸುವುದಿಲ್ಲ ಎಂದು ಹೇಳಿ ಘೋಷಣೆಗಳನ್ನು ಕೂಗುತ್ತ ಸಭೆಯಿಂದ ಹೊರನಡೆದರು. ಬಳಿಕ ಕೋರಂ ಕೊರತೆ ಹಿನ್ನೆಲೆಯಲ್ಲಿ ಸಭೆ ರದ್ದು ಪಡಿಸಲಾಯಿತು.
ನಂತರ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಪ್ರಕರಣದ ಆರೋಪಿಯಾಗಿರುವ ಅಧ್ಯಕ್ಷರು ಹಾಗೂ ಸದಸ್ಯರ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಜಾಮೀನು ಸಿಗದೆ ಸಭೆ ಹೇಗೆ ಕರೆದರು. ಇವರನ್ನು ಯಾಕೆ ಪೊಲೀಸರು ಬಂಧಿಸಿಲ್ಲ. ತಪ್ಪು ಮಾಡಿದರೂ ಬಂಧಿಸದಿರುವುದು ಕಾನೂನು ವಿರೋಧಿಯಾಗಿದೆ ಎಂದು ಸ್ಥಳದಲ್ಲಿದ್ದ ವೃತ್ತ ನಿರೀಕ್ಷಕರಲ್ಲಿ ಆರೋಪಿಸಿದರು.
