ತ್ರಿಪುರಾ ಹಿಂಸಾಚಾರ: ಬಿಜೆಪಿ ಮೌನದ ವಿರುದ್ಧ ಹೋರಾಟಗಾರರು, ವಿದ್ಯಾರ್ಥಿಗಳಿಂದ ದಿಲ್ಲಿಯಲ್ಲಿ ಪ್ರತಿಭಟನೆ
ಹೊಸದಿಲ್ಲಿ, ಅ. 30: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರದ ಕುರಿತು ಬಿಜೆಪಿ ಸರಕಾರದ ಮೌನ ವಿರೋಧಿಸಿ ಸಾಮಾಜಿಕ ಹೋರಾಟಗಾರರು, ನಾಗರಿಕರ ಗುಂಪು ಹಾಗೂ ವಿದ್ಯಾರ್ಥಿಗಳು ಹೊಸದಿಲ್ಲಿಯಲ್ಲಿ ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ತ್ರಿಪುರಾ ಭವನದಿಂದ ರ್ಯಾಲಿ ಆರಂಭಿಸಿದ ಪ್ರತಿಭಟನಾಕಾರರನ್ನು ದಿಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು. ಬಾಂಗ್ಲಾದೇಶದ ಕೋಮು ಹಿಂಸಾಚಾರದ ವಿರುದ್ಧ ತ್ರಿಪುರಾದಲ್ಲಿ ವಿಶ್ವಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಹಿಂದೂ ಜಾಗರಣ ಮಂಚ್ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳು ಅಕ್ಟೋಬರ್ 26ರಂದು ಆಯೋಜಿಸಿದ ರ್ಯಾಲಿಯ ಸಂದರ್ಭ ಪ್ರತಿಭಟನಕಾರರು ಮಸೀದಿಗೆ ನುಗ್ಗಿ ಲೂಟಿ ಮಾಡಿದ್ದರು.
ಮುಸ್ಲಿಮರಿಗೆ ಸೇರಿದ ಕೆಲವು ಅಂಗಡಿ, ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಆದರೆ, ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಹಜವಾಗಿ ಇದೆ. ಅಲ್ಲಿ ಯಾವುದೇ ಮಸೀದಿಗೆ ಬೆಂಕಿ ಹಚ್ಚಿಲ್ಲ ಎಂದು ತ್ರಿಪುರಾ ಪೊಲೀಸರು ಹೇಳಿದ್ದಾರೆ.
ಉತ್ತರ ತ್ರಿಪುರಾ ಜಿಲ್ಲೆಯ ಪನಿಸಾಗರ್ ಉಪ ವಲಯದ ಚಾಮ್ತಿಲ್ಲಾ ಜಿಲ್ಲೆಯಲ್ಲಿ ಸಂಘಪರಿವಾರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯ ಸಂದರ್ಭ ಮುಸ್ಲಿಮರ ಮೇಲೆ ದಾಳಿ ನಡೆದ ಎರಡು ದಿನಗಳ ಬಳಿಕ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.
‘‘ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧ ನಡೆದ ದಾಳಿಯ ಬಗ್ಗೆ ರಾಜ್ಯ ಸರಕಾರ ಹಾಗೂ ಜನರು ಮೌನವಾಗಿರುವುದರಿಂದ ಮುಸ್ಲಿಮರಿಗೆ ಅಸುರಕ್ಷತೆ ಕಾಡುತ್ತಿದೆ. ನಾವು ಇದನ್ನು ಘರ್ಷಣೆ ಎಂದು ಕರೆಯಲು ಬಯಸುವುದಿಲ್ಲ. ರಾಜ್ಯದಲ್ಲಿ ನಮ್ಮ ಸಹ ಪ್ರಜೆಗಳನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ. ನಮ್ಮ ಅಸ್ಮಿತೆಗೆ ಬೆದರಿಕೆ ಇದೆ. ನಾವು ಬೆಂಬಲ ಹಾಗೂ ರಾಜ್ಯದಿಂದ ಉತ್ತರವನ್ನು ಬಯಸುತ್ತೇವೆ’’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿ ಫೈಝಾ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ವಿಫಲವಾಗಿರುವುದಕ್ಕೆ ಹಾಗೂ ಮುಸ್ಲಿಮರ ಮೇಲಿನ ದೌರ್ಜನ್ಯದ ಬಗ್ಗೆ ಬಿಜೆಪಿ ನಾಯಕತ್ವ ಮೌನವಾಗಿರುವುದಕ್ಕೆ ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ದೇವ್ ಅವರು ರಾಜೀನಾಮೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
‘ವೈರ್’ ಪತ್ರಿಕೆಯೊಂದಿಗೆ ಮಾತನಾಡಿದ ಎನ್‌ಸಿಪಿಯ ಪ್ರಧಾನ ಕಾರ್ಯದರ್ಶಿ ಶೇಖ್ ಗುಲಾಮ್ ಜಿಲಾನಿ, ‘‘ಬಿಜೆಪಿ ದೇಶ ಹಾಗೂ ತ್ರಿಪುರಾದ ನಿವಾಸಿಗಳನ್ನು ಸಂಪೂರ್ಣವಾಗಿ ವಿಫಲಗೊಳಿಸಿದೆ. ರಾಜ್ಯದಲ್ಲಿ ಅದು ಕಾನೂನು ಹಾಗೂ ಸುವ್ಯವಸ್ಥೆಯನ್ನು ನಿಯಂತ್ರಿಸಬಹುದಿತ್ತು. ಆದರೆ, ಅದು ಸಂಪೂರ್ಣವಾಗಿ ವಿಫಲವಾಗಿದೆ. ನಾವು ಈ ವಿಷಯದ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತೇವೆ ’’ ಎಂದಿದ್ದಾರೆ.







