ಎಲ್ಲ ಪಟಾಕಿಗಳಿಗೆ ನಿಷೇಧ ಇಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಅ. 30: ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ ಇಲ್ಲ. ಬೇರಿಯುಂ ಸಾಲ್ಟ್ ಅನ್ನು ಒಳಗೊಂಡಿರುವ ಪಟಾಕಿಗಳಿಗೆ ಮಾತ್ರ ನಿಷೇಧ ವಿಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ. ನ್ಯಾಯಾಲಯ ನೀಡಿದ ನಿರ್ದೇಶನ ಉಲ್ಲಂಘಿಸಲು ಹಾಗೂ ಆಚರಣೆಯ ನೆಪದಲ್ಲಿ ನಿಷೇಧಿತ ಪಟಾಕಿಗಳ ಬಳಕೆಗೆ ಅವಕಾಶ ನೀಡಲು ಯಾವುದೇ ಪ್ರಾಧಿಕಾರಕ್ಕೆ ಅನುಮತಿ ಇಲ್ಲ ಎಂದು ಎಂ.ಆರ್. ಶಾ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ಪೀಠ ಹೇಳಿದೆ.
ಆಚರಣೆ ಇನ್ನೊಬ್ಬರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಬಾರದು. ಇನ್ನೊಬ್ಬರ ಜೀವದೊಂದಿಗೆ ನಿರ್ದಿಷ್ಟವಾಗಿ ಹಿರಿಯ ನಾಗರಿಕರು ಹಾಗೂ ಮಕ್ಕಳ ಜೀವದೊಂದಿಗೆ ಆಟ ಆಡಲು ಯಾರೊಬ್ಬರಿಗೂ ಅನುಮತಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ನಿಷೇಧಿತ ಪಟಾಕಿಗಳ ಉತ್ಪಾದನೆ, ಬಳಕೆ ಹಾಗೂ ಮಾರಾಟದ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇಲೆಕ್ಟ್ರಾನಿಕ್ಸ್ /ಮುದ್ರಣ ಮಾಧ್ಯಮ ಹಾಗೂ ಸ್ಥಳೀಯ ಕೇಬಲ್ ಸೇವೆಗಳ ಮೂಲಕ ಪ್ರಚಾರ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.





