ಬಿಜೆಪಿ ವಿರುದ್ಧ ಹೋರಾಡಲು ಪ್ರಾದೇಶಿಕ ಪಕ್ಷಗಳು ಸಂಘಟಿತವಾಗಬೇಕು: ಮಮತಾ ಬ್ಯಾನರ್ಜಿ

ಪಣಜಿ, ಅ. 30: ಮತ ವಿಭಜನೆ ತಪ್ಪಿಸಲು ಸಂಘಟಿತರಾಗಿ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಗೋವಾದ ಎಲ್ಲ ಪ್ರಾದೇಶಿಕ ಪಕ್ಷಗಳಲ್ಲಿ ಶನಿವಾರ ಆಗ್ರಹಿಸಿದ್ದಾರೆ.
ಗೋವಾ ಫಾರ್ವಡ್ ಪಕ್ಷ (ಜಿಎಫ್‌ಪಿ)ದ ಅಧ್ಯಕ್ಷ ವಿಜಯ್ ಸರ್ದೇಸಾಯಿ ಅವರೊಂದಿಗೆ ಶನಿವಾರ ಮಾತುಕತೆ ನಡೆಸಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೋವಾದಲ್ಲಿ ಚುನಾವಣೆ ಎದುರಿಸಲು ವಿಜಯ್ ಸರ್ದೇಸಾಯಿ ಅವರ ಗೋವಾ ಫಾರ್ವರ್ಡ್ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, ‘‘ಬಿಜೆಪಿಯ ವಿರುದ್ಧ ಜೊತೆಯಾಗಿ ಹೋರಾಡುವ ವಿಷಯದ ಕುರಿತು ನಾವು ಚರ್ಚೆ ನಡೆಸಿದ್ದೇವೆ. ನಿರ್ಧಾರ ಅವರಿಗೆ ಬಿಟ್ಟದ್ದು. ಮತ ವಿಭಜನೆಯಾಗುವುದನ್ನು ತಪ್ಪಿಸಲು ನಾವು ಬಯಸುತ್ತೇವೆ. ಆದುದರಿಂದ ಪ್ರಾದೇಶಿಕ ಪಕ್ಷಗಳು ಸಂಘಟಿತವಾಗಬೇಕು’’ ಎಂದರು.
ಈ ನಡುವೆ ಸರ್ದೇಸಾಯಿ, ‘‘ಮಮತಾ ಬ್ಯಾನರ್ಜಿ ಅವರು ಪ್ರಾದೇಶಿಕ ಪಕ್ಷದ ಗೌರವದ ಸಂಕೇತ. ನಮ್ಮದು ಕೂಡ ಪ್ರಾದೇಶಿಕ ಪಕ್ಷ. ಬಿಜೆಪಿಯ ವಿರುದ್ಧ ಹೋರಾಡಲು ಸಮಾನ ಮನಸ್ಕ ಪಕ್ಷಗಳು ಸಂಘಟಿತವಾಗಬೇಕು ಎಂಬ ಮಮತಾ ಬ್ಯಾನರ್ಜಿ ಅವರ ಇತ್ತೀಚೆಗಿನ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ನಾನು ಇಂದು ಅವರನ್ನು ಭೇಟಿಯಾಗಿದ್ದೇನೆ. ಈ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚಿಸಲಿದ್ದೇವೆ’’ ಎಂದಿದ್ದಾರೆ.





