2020ರಲ್ಲಿ ಆತ್ಮಹತ್ಯೆಗೆ ಶರಣಾದವರಲ್ಲಿ ದಿನಗೂಲಿ ಕಾರ್ಮಿಕರೇ ಅಧಿಕ: ವರದಿ

ಹೊಸದಿಲ್ಲಿ,ನ.30: 2020ರಲ್ಲಿ ಭಾರತದಲ್ಲಿ ಆಕಸ್ಮಿಕ ಸಾವುಗಳು ಹಾಗೂ ಆತ್ಮಹತ್ಯೆಗಳ ಕುರಿತ ವರದಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಇಲಾಖೆ (ಎನ್‌ಸಿಆರ್‌ಬಿ) ಗುರುವಾರ ಬಿಡುಗಡೆಗೊಳಿಸಿದೆ. ಕೋವಿಡ್-19 ಸೋಂಕಿನ ವರ್ಷದಲ್ಲಿ ರಸ್ತೆ ಅಪಘಾತ ಹಾಗೂ ಅದಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಇಳಿಕೆಯುಂಟಾಗಿದೆ. ಆದರೆ ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 1,53,052ಕ್ಕೆ ತಲುಪಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ. 2019ರಲ್ಲಿ ಸಂಭವಿಸಿದ ಆತ್ಮಹತ್ಯಾ ಸಾವುಗಳಿಗಿಂತ ಕಳೆದ ವರ್ಷ ಶೇ.10ರಷ್ಟು ಏರಿಕೆಯಾಗಿದೆಯೆಂದು ವರದಿ ತಿಳಿಸಿದೆ.
2020ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 11.3 ಶೇಕಡ ಆಗಿದ್ದರೆ, 2019ರಲ್ಲಿ ಇದು 10.4 ಶೇಕಡ ಆಗಿತ್ತು. ಇದು 2010ಕ್ಕಿಂತ ಶೇ.11.4ರಷ್ಟು ಅಧಿಕವಾಗಿದೆ.
2020ರಲ್ಲಿ ಆತ್ಮಹತ್ಯೆಗೆ ಶರಣಾದವರಲ್ಲಿ ದಿನಗೂಲಿ ಕಾರ್ಮಿಕರು ಅತ್ಯಧಿಕ ಪ್ರಮಾಣದಲ್ಲಿದ್ದಾರೆ . ಕಳೆದ ವರ್ಷ ಲಾಕ್‌ಡೌನ್ ಹೇರಿಕೆಯ ಬಳಿಕ ಉದ್ಯೋಗವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ದಿನಗೂಲಿ ಕಾರ್ಮಿಕರು ತಮ್ಮ ಊರುಗಳಿಗೆ ನಿರ್ಗಮಿಸಿ, ಅಲ್ಲಿ ಉದ್ಯೋಗವನ್ನು ಅರಸಬೇಕಾದಂತಹ ಅತಂತ್ರ ಪರಿಸ್ಥಿತಿಯುಂಟಾಗಿತ್ತು. 2020ರಲ್ಲಿ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.24.6 ಶೇಕಡ ಮಂದಿ ದಿನಗೂಲಿ ಕಾರ್ಮಿಕರೆಂದು ವರದಿ ತಿಳಿಸಿದೆ.
2014ರಲ್ಲಿ ಶೇ.12ರಷ್ಟು ದಿನಗೂಲಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ, 2020ರಲ್ಲಿ ಆ ಸಂಖ್ಯೆ 24.6 ಶೇಕಡಕ್ಕೆ ತಲುಪಿದ್ದು, ಆರು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ.
ಇತ್ತ ಸಾವಿಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, 2020ರಲ್ಲಿ ಒಟ್ಟು 14,825 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಸಾವಿಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ 10,335 ಆಗಿದ್ದು, ಕಳೆದ ವರ್ಷ ಶೇ.21.20ರಷ್ಟು ಹೆಚ್ಚಳವಾಗಿದೆ.
ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಡ ಸ್ವೋದ್ಯೋಗಿಗಳ ಸಂಖ್ಯೆಯಲ್ಲೂ ಅದರ ಹಿಂದಿನ ವರ್ಷಕ್ಕಿಂತ ಶೇ.7.67ರಷ್ಟು ಹೆಚ್ಚಳವಾಗಿದೆ. ವ್ಯಾಪಾರಿಗಳ ಆತ್ಮಹತ್ಯೆ ಪ್ರಮಾಣದಲ್ಲಿ 2019ಕ್ಕಿಂತ ಶೇ.26.1ರಷ್ಟು ಹೆಚ್ಚಳವಾಗಿದೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ.
2022ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದವರ ಪೈಕಿ ಗೃಹಿಣಿಯರು (ಶೇ.14.6), ಸ್ವೋದ್ಯೋಗಿಗಳು (11,3 ಶೇ.), ವೃತ್ತಿಪರ/ವೇತನದಾರರು (ಶೇ.9.7 ಶೇ.), ರೈತರು/ಕೃಷಿಕರು (ಶೇ.7), ನಿವೃತ್ತ ನೌಕರರು ( 1 ಶೇ.) ಹಾಗೂ ಶೇ.13.4 ಇತರ ಶ್ರೇಣಿಗಳವರಾಗಿದ್ದಾರೆಂದು ವರದಿ ತಿಳಿಸಿದೆ.