ಕನ್ನಡಿಗನಾಗಿ ಜನಿಸಿದ್ದಕ್ಕೆ ಹೆಮ್ಮೆ ಪಡಬೇಕು: ಡಿಸಿಪಿ ಹರಿರಾಂ ಶಂಕರ್
ಮಂಗಳೂರು, ಅ.30: ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಗೆ ಅದರದ್ದೇ ಆದ ಸಂಸ್ಕೃತಿ ಇದೆ. ಪ್ರತಿಯೊಬ್ಬ ಕನ್ನಡಿಗನೂ ಕೂಡ ಇಲ್ಲಿ ಜನಿಸಿದ್ದಕ್ಕೆ ಹೆಮ್ಮೆ ಪಡಬೇಕು ಎಂದು ನಗರ ಪೊಲೀಸ್ ಉಪಆಯುಕ್ತ ಹರಿರಾಂ ಶಂಕರ್ ಹೇಳಿದ್ದಾರೆ.
ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಪಿ.ದಯಾನಂದ ಪೈ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಅಭಿಯಾನ ಸ್ವರ ಸಂಭ್ರಮ ಕನ್ನಡ ಗೀತೆಗಳ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ಶೈಲಿಯ ಕನ್ನಡ ಭಾಷೆಯನ್ನು ಮಾತನಾಡಲಾಗುತ್ತದೆ. ಆ ಶೈಲಿ ಆ ಊರಿನ ಸೌಂದರ್ಯ ಮತ್ತು ಸಂಸ್ಕೃತಿಯನ್ನು ವರ್ಣಿಸುವಂತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಕೆ., ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಗೋವರ್ಧನ್ ರಾವ್ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಹಾಗೂ ಇತರರು ಉಪಸ್ಥಿತರಿದ್ದರು.
ಪತ್ರಕರ್ತ ಭಾಸ್ಕರ್ ರೈ ನಿರೂಪಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಪ್ರಕಾಸ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಗರದ ಕಲಾ ಸಾಧನ ಮ್ಯೂಸಿಕ್ ಸ್ಕೂಲ್‌ನ ಕಲಾವಿದೆ ವಿಭಾ ನಾಯಕ್ ಹಾಗೂ ತಂಡದಿಂದ ಕನ್ನಡ ಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಿತು.







