Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..

ಅಪ್ಪು ನೆನಪಿನಲ್ಲಿ...

ಶಶಿಕರ ಪಾತೂರುಶಶಿಕರ ಪಾತೂರು31 Oct 2021 12:05 AM IST
share
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..

 ರೇಡಿಯೊದಲ್ಲಿ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ ಎನ್ನುವ ಹಾಡು ಆಲಿಸುವಾಗ ಆತ್ಮೀಯವಾದ ಕಂಠ ಅದು. ಅಪ್ಪುಬಾಲನಟನಾಗಿ ನಟಿಸಿದ ಚಿತ್ರಗಳಲ್ಲಿ ‘ಬೆಟ್ಟದ ಹೂವು’ ತುಂಬ ಇಷ್ಟವಾಗಿತ್ತು. ‘‘ಪ್ರಶಸ್ತಿಗಾಗಿ ಚಿತ್ರ ಮಾಡುವುದಲ್ಲ, ಪ್ರೇಕ್ಷಕರಿಗಾಗಿ ಚಿತ್ರ ಮಾಡಬೇಕು’’ ಎನ್ನುವ ಡಾ. ರಾಜ್‌ಕುಮಾರ್ ಅವರ ಮಾತನ್ನು ಉಳಿಸಿಕೊಂಡಂತಹ ಚಿತ್ರ ಅದಾಗಿತ್ತು. ಜನಪ್ರಿಯತೆಯ ಜೊತೆಯಲ್ಲೇ ಅಪ್ಪುಶ್ರೇಷ್ಠ ಬಾಲನಟನಾಗಿ ಪ್ರಶಸ್ತಿ ಪಡೆದಾಗ ರಾಜ್‌ಕುಮಾರ್ ಕುಟುಂಬಕ್ಕೆ ದುಪ್ಪಟ್ಟು ಖುಷಿಯಾಗಿತ್ತು. ಆದರೆ ಆ ಖುಷಿ ನಾಡಿನ ಹೆಮ್ಮೆಯಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಪುನೀತ್ ಅವರಲ್ಲಿ ಅಂತಹದ್ದೊಂದು ವೇಗವನ್ನು ಕಂಡೇ ಖುದ್ದು ಅವರ ಹಿರಿಯಣ್ಣ ಶಿವರಾಜ್ ಕುಮಾರ್ ‘ಪವರ್ ಸ್ಟಾರ್’ ಎನ್ನುವ ಬಿರುದು ನೀಡಿದ್ದರು. ಆದರೆ ವಿಪರ್ಯಾಸ ಎನ್ನುವಂತೆ ಅವರು ಅದೇ ವೇಗವನ್ನು ಜಗತ್ತು ತೊರೆಯುವಲ್ಲಿಯೂ ತೋರುವಂತಾಗಿದ್ದು ದುರಂತ.

ಬೆಂಗಳೂರಿನ ಸಿನೆಮಾ ಮಾಧ್ಯಮದಲ್ಲಿದ್ದು ಕೊಂಡು ವೈಯಕ್ತಿಕವಾಗಿ ನನಗೆ ಕಂಡಂತೆ ಹೇಳುವುದಾದರೆ ಪುನೀತ್ ಅವರು ಮಾಧ್ಯಮದ ಜೊತೆಗೆ ಹೆಚ್ಚು ಹೊತ್ತು ಕಳೆದವರಲ್ಲ. ಅವರು ಮಾತುಕತೆಗೆ ದೊರಕುವುದು ಅಪರೂಪದ ಸಂದರ್ಭಗಳಲ್ಲಿ ಮಾತ್ರ. ಆಡುವುದು ಕೂಡ ನಿಯಮಿತವಾದ ಮಾತುಗಳನ್ನು. ಹೆಚ್ಚಿನ ಪ್ರಶ್ನೆಗಳು ಅನಗತ್ಯ ಅನಿಸಿದಾಗ ಮುದ್ರಣ ಮಾಧ್ಯಮದವರತ್ತ ಎಂದೂ ಸಿಡುಕಿದವರಲ್ಲ. ಬದಲಿಗೆ ‘‘ನೀವೇನ್ರೀ ಹೀಗೆ ಕೇಳ್ತೀರ?’’ ಎಂದು ನಕ್ಕು ಜಾರಿಕೊಳ್ಳುವ ಜಾಣ್ಮೆ ಅವರಿಗೆ ಇತ್ತು. ಸುದ್ದಿಗೋಷ್ಠಿಯಲ್ಲಿಯೂ ಅಷ್ಟೇ, ಬಂದವರೇ ಚಿತ್ರದ ಬಗ್ಗೆ ಮಾತನಾಡಿ ಬೇರೆ ಯಾವುದೇ ವಿವಾದಗಳಿಗೆ ದೊರಕದೆ ವಿದ್ಯುತ್ ವೇಗದಲ್ಲೇ ಮಾಯವಾಗಿಬಿಡುತ್ತಿದ್ದರು. ಪುನೀತ್ ಒಬ್ಬ ನಟ ಮಾತ್ರ ಆಗಿರಲಿಲ್ಲ ಎನ್ನುವುದು ಕೂಡ ಅವರು ಸದಾ ಕಾರ್ಯಚಟುವಟಿಕೆಯಲ್ಲಿರಲು ಕಾರಣವಾಗಿರಬಹುದು.

ವೇಗದ ಬದುಕು ಜಗತ್ತಿನಲ್ಲಿ ಹೆಚ್ಚು ಕೆಲಸಗಳನ್ನು ಮಾಡಿ, ಆ ಕೆಲಸಗಳ ಮೂಲಕ ಮುಂದೆಯೂ ಗುರುತಿಸುವಂತೆ ಮಾಡುತ್ತದೆ. ಆದರೆ ಅವರು ಬದುಕಿದ್ದಾಗಿನ ವೇಗ ನಮಗೆ ಅವರ ನಡೆಯನ್ನು ಅರ್ಥ ಮಾಡಿಕೊಳ್ಳುವ ಅವಕಾಶವನ್ನೇ ಕಡಿಮೆ ಮಾಡುತ್ತದೆ. ಅದಕ್ಕೊಂದು ದೊಡ್ಡ ಉದಾಹರಣೆ ಶಂಕರನಾಗ್. ಮೂರೇ ದಶಕದ ಬದುಕು ಮುಗಿಸಿದ ಬಳಿಕ ಮತ್ತೆ ಮೂರು ದಶಕ ಕಳೆದರೂ ಜನತೆಗೆ ಇಂದಿಗೂ ಅವರೆಂದರೆ ಇಷ್ಟ. ಅಪ್ಪುಕೂಡ ಹಾಗೆಯೇ. ಅವರ ನಿಧನದ ಬಳಿಕ ಅವರು ಎಷ್ಟೆಲ್ಲ ಸಮಾಜ ಸೇವೆಗಳನ್ನು ಮಾಡುತ್ತಿದ್ದರು ಎನ್ನುವ ಪಟ್ಟಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ತೊಡಗಿವೆ. ಬದುಕಿದ್ದಾಗ ಯಾಕೆ ಇದನ್ನು ಯಾರೂ ಹೇಳಿಲ್ಲ ಎಂದರೆ ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ಅದಕ್ಕೆ ಅವಕಾಶ ನೀಡಿರಲಿಲ್ಲ! ಯಾಕೆಂದರೆ ಅದು ಡಾ.ರಾಜ್ ಕುಮಾರ್ ಅವರು ಹಾಕಿಕೊಟ್ಟ ಪರಂಪರೆ. ಒಂದು ಕೈಯಲ್ಲಿ ದಾನ ಮಾಡಿದರೆ ಆ ವಿಚಾರ ಮತ್ತೊಂದು ಕೈಗೆ ಗೊತ್ತಾಗದಷ್ಟು ಗೌಪ್ಯವಾಗಿರಬೇಕು ಎನ್ನುವುದೇ ಆ ನಿಯಮ. ಇದನ್ನು ರಾಜ್ ಕುಟುಂಬದವರು ಮಾತ್ರವಲ್ಲದೆ ಕನ್ನಡದ ಸಾಕಷ್ಟು ಹಿರಿಯ ತಾರೆಯರು ಕೂಡ ಅನುಸರಿಸುತ್ತಾರೆ. ಹಾಗಾಗಿ ಕಲಾವಿದರ ಸಂಪಾದನೆ ಬಗ್ಗೆ ಮಾತ್ರ ಆಡಿಕೊಳ್ಳುವವರು ಆ ಬಗ್ಗೆ ಕೂಡ ಮನದಟ್ಟು ಮಾಡಿಕೊಂಡಿರುವುದು ಉತ್ತಮ. ಎಲ್ಲಕ್ಕಿಂತ ಒಬ್ಬ ನಟನ ಅಂತ್ಯಕ್ರಿಯೆಗೆ ಗಣ್ಯರು ಮಾತ್ರವಲ್ಲ, ಸಾಗರದಂತೆ ಅಭಿಮಾನಿಗಳು ಸೇರುತ್ತಾರಲ್ಲ? ಆ ಸಂಪಾದನೆಯನ್ನು ಯಾರಿಂದಲೂ ಪ್ರಶ್ನಿಸಲು ಸಾಧ್ಯವಿಲ್ಲ.

ಪಿಆರ್‌ಕೆ ಅಂದರೆ ಪುನೀತ್‌ ರಾಜ್‌ಕುಮಾರ್ ಮಾತ್ರವಲ್ಲ, ಪಾರ್ವತಮ್ಮ ರಾಜ್‌ಕುಮಾರ್ ಕೂಡ ಹೌದು. ಅವರಲ್ಲಿ ಮಾತೃಹೃದಯದ ಜೊತೆಯಲ್ಲೇ ತಾಯಿಗಿದ್ದ ವ್ಯಾವಹಾರಿಕ ಜ್ಞಾನವೂ ಸೇರಿಕೊಂಡಿತ್ತು. ಹೊಸ ನಿರ್ದೇಶಕರ ಉತ್ತಮ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವುದಷ್ಟೇ ಅಲ್ಲ, ಒಟಿಟಿ ಫ್ಲಾಟ್‌ಫಾರ್ಮ್ ನ ವ್ಯವಹಾರ ರೀತಿಯ ಬಗ್ಗೆ ಸರಿಯಾಗಿ ಅರಿತುಕೊಂಡಿದ್ದ ಅಪರೂಪದ ಚಿತ್ರೋದ್ಯಮಿ ಕೂಡ ಅವರಾಗಿದ್ದರು. ಅವರು ಒಬ್ಬ ವ್ಯಾಪಾರಿಯಂತೆ ಕಂಡು ಬಂದರೂ ಕೂಡ ಅದನ್ನು ಹೇಗೆ ಸಮಾಜ ಸೇವೆಗೆ ಬಳಸಿಕೊಂಡಿದ್ದರು ಎನ್ನುವುದನ್ನು ಜನತೆ ಅರಿತಿದ್ದಾರೆ. ಅಲ್ಲದೆ ಶಿವಣ್ಣನಷ್ಟು ಸರಳತೆ ಇವರಿಗಿಲ್ಲವೇನೋ ಎಂದು ನಾನು ಸಂದೇಹ ವ್ಯಕ್ತಪಡಿಸಿದಾಗೆಲ್ಲ ಅವರ ಸಹಕಲಾವಿದರು ನನ್ನನ್ನು ತಿದ್ದಿದ್ದಾರೆ. ಸ್ವತಃ ಪುನೀತ್ ಪೋಷಕ ಪಾತ್ರಧಾರಿಗಳ ನಟನೆಯನ್ನು ಮೆಚ್ಚಿ ಫೋನ್ ಮಾಡಿ ವಿಚಾರಿಸುತ್ತಿದ್ದುದು, ಕ್ಯಾರವಾನ್ ಇದ್ದರೂ ಒಳಗೆ ಹೋಗದೆ ಇತರ ಕಲಾವಿದರ ಜೊತೆಗೆ ಬೆರೆಯುತ್ತಿದ್ದುದು ಇವೆಲ್ಲವನ್ನು ನನ್ನೊಂದಿಗೆ ಮಾತನಾಡುವ ಸಂದರ್ಭದಲ್ಲಿ ರಚಿತಾರಾಮ್, ಚಿತ್ಕಳಾ ಬಿರಾದಾರ ಮೊದಲಾದ ನಟಿಯರೇ ಹೇಳಿಕೊಂಡದ್ದಿದೆ.

ರಾಜಕುಮಾರ ಸಿನೆಮಾ ನೋಡಿದ ಮೇಲೆ ಪುನೀತ್ ಅವರ ಆಂಗಿಕ ಭಾಷೆಯಲ್ಲಿ ಹೆಚ್ಚು ಹೆಚ್ಚು ರಾಜ್‌ಕುಮಾರ್ ಕಾಣಿಸುವಂತೆ ಅನಿಸಿತ್ತು. ಅದನ್ನು ಮನಸ್ಸಲ್ಲಿಟ್ಟುಕೊಂಡೇ ನಾನು ‘‘ತಂದೆಯ ಆತ್ಮಚರಿತ್ರೆ ಕುರಿತಾದ ಸಿನೆಮಾ ಮಾಡಿದರೆ ನೀವು ಅದರಲ್ಲಿ ರಾಜ್ ಕುಮಾರ್ ಆಗಿ ನಟಿಸುತ್ತೀರ?’’ ಎಂದು ಅವರಲ್ಲೇ ಕೇಳಿದ್ದೆ. ಅದಕ್ಕೆ ನಗುತ್ತಾ ಉತ್ತರಿಸಿದ ಅವರು, ‘‘ಅಂತಹ ಯಾವುದೇ ಆಫರ್ಸ್ ನನ್ನ ಮುಂದೆ ಬಂದಿಲ್ಲ. ಹಾಗೆ ಬಂದಾಗ ನೋಡುವ’’ ಎಂದಿದ್ದರು. ಈಗ ಪುನೀತ್ ಅವರೇ ಕತೆಯಾಗಿಬಿಟ್ಟಿದ್ದಾರೆ. ಆದರೆ ನಮ್ಮ ಜೀವನಕ್ಕಾಗುವಷ್ಟು ನೆನಪುಗಳನ್ನು ತುಂಬಿಕೊಟ್ಟಿದ್ದಾರೆ.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X