ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆ ನಡೆಸಬೇಕು: ಎಸ್‌ಕೆಎಂ

ಹೊಸದಿಲ್ಲಿ, ಅ. 30: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ನ್ಯಾಯ ದೊರೆಯಲು ಪ್ರಕರಣದ ತನಿಖೆಯ ಮೇಲ್ವಿಚಾರಣೆಯನ್ನು ನೇರವಾಗಿ ಸುಪ್ರೀಂಕೋರ್ಟ್ ನಡೆಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಅಧಿಕೃತ ಹೇಳಿಕೆಯಲ್ಲಿ ಶುಕ್ರವಾರ ಹೇಳಿದೆ.
‘‘ಉತ್ತರ ಪ್ರದೇಶ ಸರಕಾರ ಪ್ರಮುಖ ತನಿಕಾಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ತನಿಖೆಯ ಪ್ರಗತಿಯನ್ನು ನಿಧಾನಗೊಳಿಸುತ್ತಿದೆ’’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ಆರೋಪಿಸಿದೆ. ಈ ವರ್ಗಾವಣೆ ಬಗ್ಗೆ ಸುಪ್ರೀಂ ಕೋರ್ಟ್ ಪರಿಶೀಲಿಸುವ ಹಾಗೂ ಅಧಿಕಾರಿಗಳನ್ನು ವರ್ಗಾಯಿಸಿರುವ ಬಗ್ಗೆ ರಾಜ್ಯ ಸರಕಾರವನ್ನು ಪ್ರಶ್ನಿಸುವ ಭರವಸೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ವ್ಯಕ್ತಪಡಿಸಿದೆ. ‘‘ಈ ನಡುವೆ, ಆರೋಪಿ ಆಶಿಶ್ ಮಿಶ್ರಾ ವಿಐಪಿ ಆತಿಥ್ಯ ಸ್ವೀಕರಿಸುತ್ತಿರುವ ಬಗ್ಗೆ ವರದಿಗಳು ನಿರಂತರ ಬರುತ್ತಿವೆ. ಈ ಪ್ರಕರಣದಲ್ಲಿ ನ್ಯಾಯ ದೊರೆಯಲು ಸಂಪೂರ್ಣ ತನಿಖೆಯ ಮೇಲ್ವಿಚಾರಣೆಯನ್ನು ನೇರವಾಗಿ ಸುಪ್ರೀಂಕೋರ್ಟ್ ನಡೆಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತೊಮ್ಮೆ ಆಗ್ರಹಿಸುತ್ತದೆ ’’ ಎಂದು ಹೇಳಿಕೆ ತಿಳಿಸಿದೆ.





