ಎನ್ ಸಿಬಿ ಸಾಕ್ಷಿದಾರ ಕಿರಣ್ ಗೋಸಾವಿ ವಿರುದ್ಧ ವಂಚನೆ ಆರೋಪದಲ್ಲಿ ಮತ್ತೊಂದು ಎಫ್ ಐಆರ್ ದಾಖಲು

ಹೊಸದಿಲ್ಲಿ: ಕ್ರೂಸ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಎನ್‌ಸಿಬಿಯ ಸಾಕ್ಷಿಯಾಗಿರುವ ಕಿರಣ್ ಗೋಸಾವಿ ವಿರುದ್ಧ ಮಲೇಷ್ಯಾದ ದೊಡ್ಡ ಹೋಟೆಲ್‌ವೊಂದರಲ್ಲಿ ಕೆಲಸ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ ವ್ಯಕ್ತಿಯೊಬ್ಬನಿಗೆ ವಂಚಿಸಿದ ಆರೋಪದ ಮೇಲೆ ಮತ್ತೊಂದು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.
ವನವಾಡಿಯಲ್ಲಿ ಗೋಸಾವಿ ವಿರುದ್ದ ಹೊಸ ಪ್ರಕರಣವೊಂದು ದಾಖಲಾಗಿದೆ. ಗೋಸಾವಿ ವಿರುದ್ಧ ಪುಣೆಯಲ್ಲಿ ದಾಖಲಾದ ಮೂರನೇ ಪ್ರಕರಣ ಇದಾಗಿದೆ. ಗೋಸಾವಿ ದೂರುದಾರರಿಗೆ ಬಂದೂಕಿನಿಂದ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಕುಖ್ಯಾತ ಉದ್ಯೋಗ ದರೋಡೆಕೋರ ಎಂದು ಆಪಾದಿಸಲ್ಪಟ್ಟ ಸ್ವಯಂ-ಶೈಲಿಯ ಪತ್ತೇದಾರಿ ಗೋಸಾವಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಾರ್ಡೆಲಿಯಾ ಕ್ರೂಸ್ ನಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ 'ಸ್ವತಂತ್ರ ಸಾಕ್ಷಿ' ಎಂದು ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಲಾಗಿದೆ.
2018 ರಲ್ಲಿ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಗೋಸಾವಿಯನ್ನು ಪೊಲೀಸರು ಅಕ್ಟೋಬರ್ 28 ರಂದು ಬಂಧಿಸಿದ್ದರು. ನಂತರ ಆತನನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ನವೆಂಬರ್ 5 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು. ಏತನ್ಮಧ್ಯೆ, ಈತನ ವಿರುದ್ಧ ವಂಚನೆ ಮಾಡಿದ ಇನ್ನೂ ನಾಲ್ಕು ದೂರುಗಳು ಪೊಲೀಸರಿಗೆ ಬಂದವು. ಮೂರು ದೂರುಗಳ ಆಧಾರದ ಮೇಲೆ ಶನಿವಾರ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.