ಸತತ ಐದನೇ ದಿನವೂ ದೇಶದಾದ್ಯಂತ ಸಾರ್ವಕಾಲಿಕ ಎತ್ತರ ತಲುಪಿದ ಪೆಟ್ರೋಲ್, ಡೀಸೆಲ್ ದರ
ಮುಂಬೈನಲ್ಲಿ ಲೀಟರ್ ಗೆ 115 ರೂ. ದಾಟಿದ ಪೆಟ್ರೋಲ್ ಬೆಲೆ

ಹೊಸದಿಲ್ಲಿ,ಅ.31: ಸತತ ಐದನೇ ದಿನವಾದ ರವಿವಾರವೂ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದ್ದು,ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶಾದ್ಯಂತ ಸಾರ್ವಕಾಲಿಕ ಎತ್ತರವನ್ನು ತಲುಪಿವೆ. ಮುಂಬೈನಲ್ಲಿ ಪ್ರತಿ ಲೀ.ಗೆ 34 ಪೈಸೆ ಏರಿಕೆಯೊಂದಿಗೆ ಪೆಟ್ರೋಲ್ ಬೆಲೆ 115.15 ರೂ.ಗೆ ತಲುಪಿದ್ದು,ಇದು ಮಹಾನಗರಗಳ ಪೈಕಿ ಅತ್ಯಂತ ದುಬಾರಿ ಬೆಲೆಯಾಗಿದೆ. 37 ಪೈಸೆ ಏರಿಕೆಯೊಂದಿಗೆ ಡೀಸೆಲ್ ಬೆಲೆ ಪ್ರತಿ ಲೀ.ಗೆ 106.23 ರೂ.ಆಗಿದೆ.
ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಹೆಚ್ಚಿಸಲು ತೈಲ ಉತ್ಪಾದಕ ರಾಷ್ಟ್ರಗಳು ಸಿದ್ಧವಿಲ್ಲದಿರುವುದು ದೇಶದಲ್ಲಿ ಇಂಧನ ಬೆಲೆಗಳು ಗಗನಚುಂಬಿಯಾಗಲು ಕಾರಣವಾಗಿದೆ ಎಂದು ಕೇಂದ್ರ ಸರಕಾರವು ಪ್ರತಿಪಾದಿಸುತ್ತಿದೆ.
ಮುಂಬೈನ ನೆರೆಯ ಥಾಣೆಯಲ್ಲಿ ರವಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀ.ಗೆ 115.29 ರೂ. ಮತ್ತು 106.37 ರೂ.ಗೆ ಏರಿಕೆಯಾಗಿವೆ. ದಿಲ್ಲಿಯಲ್ಲಿ ಪ್ರತಿ ಲೀ.ಗೆ 35 ಪೈಸೆ ಏರಿಕೆಯೊಂದಿಗೆ ಪೆಟ್ರೋಲ್ ಬೆಲೆ ದಾಖಲೆಯ 109.34 ರೂ.ಗೆ ತಲುಪಿದ್ದರೆ ಡೀಸೆಲ್ ಬೆಲೆಯೂ 35 ಪೈಸೆ ಏರಿಕೆಯೊಂದಿಗೆ 98.07 ರೂ.ಗೆ ತಲುಪಿದೆ. ಹೈದರಾಬಾದ್ ಮತ್ತು ಚೆನ್ನೈಗಳಲ್ಲಿ ಲೀ.ಪೆಟ್ರೋಲ್ ಬೆಲೆ ಅನುಕ್ರಮವಾಗಿ 113.72 ರೂ. ಮತ್ತು 106.04 ರೂ.ಆಗಿದ್ದರೆ ಡೀಸೆಲ್ ಬೆಲೆ 106.98 ರೂ. ಮತ್ತು 102.25 ರೂ.ಆಗಿವೆ.
ಭಾರತವು ತನ್ನ ಅಗತ್ಯದ ಶೇ.85ರಷ್ಟು ಕಚ್ಚಾತೈಲ ಮತ್ತು ಶೇ.55ರಷ್ಟು ಅನಿಲಕ್ಕಾಗಿ ಆಮದನ್ನೇ ನೆಚ್ಚಿಕೊಂಡಿದೆ.







