ಬಿಜೆಪಿ ತೊರೆದು ಟಿಎಂಸಿಗೆ ವಾಪಸಾದ ರಾಜೀಬ್ ಬ್ಯಾನರ್ಜಿ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ನಾಯಕ ರಾಜೀಬ್ ಬ್ಯಾನರ್ಜಿ ಅವರು ರವಿವಾರ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.
ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ ರ್ಯಾಲಿ ನಡೆಸುತ್ತಿರುವ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ರಾಜೀಬ್ ಬ್ಯಾನರ್ಜಿ ‘ಘರ್ ವಾಪ್ಸಿ’ ನಡೆಯಿತು.
ರಾಜೀಬ್ ಬ್ಯಾನರ್ಜಿಯವರ ವಾಪಸಾತಿಗೆ ಅಗರ್ತಲಾವನ್ನು ಆಯ್ಕೆ ಮಾಡಿರುವ ತೃಣಮೂಲ ಕಾಂಗ್ರೆಸ್, ಬಿಜೆಪಿ ಭದ್ರಕೋಟೆ ಗೋವಾ ಅಥವಾ ತ್ರಿಪುರಾವು ಟಿಎಂಸಿ ದಾಳಿಯಿಂದ ಸುರಕ್ಷಿತವಾಗಿಲ್ಲ ಎಂದು ಸೂಚಿಸುವ ಉದ್ದೇಶಪೂರ್ವಕ ಕ್ರಮವಾಗಿದೆ ಎನ್ನಲಾಗಿದೆ.
ಬಿಜೆಪಿ ಸೇರುವ ಮೂಲಕ ತಾನು ತಪ್ಪು ಮಾಡಿದ್ದೇನೆ ಎಂದು ಹೇಳಿರುವ ಈ ಹಿಂದೆ ಮಮತಾ ಬ್ಯಾನರ್ಜಿ ಸರಕಾರದಲ್ಲಿ ಸಚಿವರಾಗಿದ್ದ ರಾಜೀಬ್ ಬ್ಯಾನರ್ಜಿ, "ನನಗೆ ಮತ್ತೆ ಸೇರ್ಪಡೆಗೊಳ್ಳಲು ಅವಕಾಶ ನೀಡಿದ ಅಭಿಷೇಕ್ ಬ್ಯಾನರ್ಜಿ ಹಾಗೂ ಮಮತಾ ಬ್ಯಾನರ್ಜಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಜೀಬ್ ಬ್ಯಾನರ್ಜಿ "ಬಿಜೆಪಿ ಸೇರುವ ಮೊದಲು ಉದ್ಯೋಗ ಮತ್ತು ಕೃಷಿಯಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿತ್ತು. ಅದು ಈಡೇರಲಿಲ್ಲ. ಮತ ಗಳಿಸುವುದು ಹಾಗೂ ಧಾರ್ಮಿಕ ರಾಜಕಾರಣ ಮಾಡುವುದು ಬಿಜೆಪಿಯ ಅಜೆಂಡಾ'' ಎಂದು ಅವರು ಆರೋಪಿಸಿದ್ದಾರೆ.