ದೇಶದ ಆರ್ಥಿಕ ಭವಿಷ್ಯದಲ್ಲಿ ಭಾರತೀಯರ ನಂಬಿಕೆ ಕ್ಷೀಣಿಸಿದೆ: ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್

ಹೊಸದಿಲ್ಲಿ, ಅ. 31: ಇತ್ತೀಚಿನ ವರ್ಷಗಳಲ್ಲಿ ದೇಶದ ಆರ್ಥಿಕ ಭವಿಷ್ಯದಲ್ಲಿ ಭಾರತೀಯರ ನಂಬಿಕೆ ಕುಸಿದಿದ್ದು,ಕೋವಿಡ್ ಸಾಂಕ್ರಾಮಿಕವು ಜನರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ ಮತ್ತು ಮಧ್ಯಮ ವರ್ಗದ ಹಲವರನ್ನು ಬಡತನಕ್ಕೆ ತಳ್ಳಿದೆ ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ ರಾಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೈದರಾಬಾದಿನ ಎನ್ಎಎಲ್ಎಸ್ಎಆರ್ ಕಾನೂನು ವಿವಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಭಾಷಣವನ್ನು ಮಾಡಿದ ರಾಜನ್, ದೇಶಿಯ ಶೇರು ಮಾರುಕಟ್ಟೆಗಳು ಉಚ್ಛ್ರಾಯದಲ್ಲಿವೆಯಾದರೂ ಅದು ಅನೇಕ ಭಾರತೀಯರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂಬ ವಾಸ್ತವವನ್ನು ಬಿಂಬಿಸುವುದಿಲ್ಲ ಎಂದು ಹೇಳಿದರು.
ಆರ್ಬಿಐ ಪ್ರಸಕ್ತ ವಿತ್ತವರ್ಷಕ್ಕೆ ಬೆಳವಣಿಗೆಯ ಅಂದಾಜನ್ನು ಮೊದಲಿನ ಶೇ.10.5ರಿಂದ ಶೇ.9.5ಕ್ಕೆ ತಗ್ಗಿಸಿದ್ದರೆ,ಐಎಂಎಫ್ 2021ನೇ ಸಾಲಿಗೆ ಶೇ.9.5 ಮತ್ತು ಮುಂದಿನ ವರ್ಷಕ್ಕೆ ಶೇ.8.5 ಬೆಳವಣಿಗೆಯನ್ನು ಅಂದಾಜಿಸಿದೆ.
ಆರ್ಥಿಕ ಕಾರ್ಯಕ್ರಮಗಳು ಒಳ್ಳೆಯ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಬೇಕು ಎಂದು ಹೇಳಿದ ಅವರು,ರಾಜ್ಯಗಳು ಸ್ಥಳೀಯರಿಗೆ ಉದ್ಯೋಗಗಳನ್ನು ಮೀಸಲಿರಿಸುವ ಪ್ರವೃತ್ತಿ ಹೆಚ್ಚುತ್ತಿದ್ದು,ಇದು ಭಾರತದ ಪರಿಕಲ್ಪನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ವಿಷಾದಿಸಿದರು.
‘ನಮ್ಮ ಆರ್ಥಿಕ ಸಾಧನೆ ಕ್ಷೀಣಿಸುತ್ತಿರುವಂತೆ ಕೇಂದ್ರದಲ್ಲಿ ಮಾತ್ರವಲ್ಲ,ಹಲವಾರು ರಾಜ್ಯಗಳಲ್ಲಿಯೂ ನಮ್ಮ ಪ್ರಜಾಸತ್ತಾತ್ಮಕ ಪ್ರಾಮಾಣಿಕತೆಗಳು,ಚರ್ಚಿಸುವ ಹಾಗೂ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಸಹಿಸಿಕೊಳ್ಳುವ ಮನೋಭಾವನೆ ಕುಂಠಿತಗೊಳ್ಳುತ್ತಿವೆ. ಸಮುದಾಯ ಭಾವನೆಗಳು ಸುಲಭವಾಗಿ ಘಾಸಿಗೊಳ್ಳುತ್ತವೆ ಎನ್ನುವುದು ನಿಮಗೂ ತಿಳಿದಿದೆ ’ ಎಂದ ರಾಜನ್, ಭಾರತವು ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಗಳಲ್ಲಿ ಭಾಗಿಯಾಗುವ ಅಗತ್ಯಕ್ಕೆ ಒತ್ತು ನೀಡಿದರು.
ಪ್ರಸಕ್ತ ಯುನಿವರ್ಸಿಟಿ ಆಫ್ ಷಿಕಾಗೋ ಬೂತ್ ಸ್ಕೂಲ್ ಆಫ್ ಬಿಸಿನೆಸ್ನಲ್ಲಿ ಬೋಧಕರಾಗಿರುವ ರಾಜನ್, ದೇಶದ ಜನಸಂಖ್ಯೆಯ ದೊಡ್ಡ ಭಾಗವನ್ನು ಗೌಣವಾಗಿಸುವ ಪ್ರಯತ್ನವು ನೈತಿಕವಾಗಿ ತಪ್ಪಾಗುತ್ತದೆ. ಎಲ್ಲರನ್ನು ಜೊತೆಯಲ್ಲಿ ಕೊಂಡೊಯ್ಯದ ಬೆಳವಣಿಗೆಯು ಸುಸ್ಥಿರವಲ್ಲ ಎಂದರು.







