ಸುರತ್ಕಲ್ ನಗರಕ್ಕೆ ಸಾವರ್ಕರ್ ಹೆಸರಿಡುವ ಪ್ರಸಾವ ಸಲ್ಲಿಸಿದ ಶಾಸಕ ಭರತ್ ಶೆಟ್ಟಿ ನಡೆ ಖಂಡನೀಯ: ಎಸ್‌ಡಿಪಿಐ
ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ನಗರಕ್ಕೆ ವಿವಾದಿತ ವ್ಯಕ್ತಿ ಸಾವರ್ಕರ್ ಹೆಸರನ್ನು ಇಡಬೇಕೆಂದು ಪಾಲಿಕೆಗೆ ಶಾಸಕ ಭರತ್ ಶೆಟ್ಟಿ ಪ್ರಸ್ತಾವ ಸಲ್ಲಿಸುವ ಮೂಲಕ ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಕೂಡಲೇ ಈ ಪ್ರಸ್ತಾವವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ ಕಾನ ಎಚ್ಚರಿಸಿದ್ದಾರೆ.
ಕಳೆದ ಮೂರೂವರೆ ವರ್ಷಗಳಿಂದ ಶಾಸಕರಾಗಿರುವ ಭರತ್ ಶೆಟ್ಟಿ ಜನಪರವಾದ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ, ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದೇ ತನ್ನ ಶಾಸಕ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಬ್ರಿಟಿಷರಿಗೆ 25ಕ್ಕೂ ಹೆಚ್ಚು ಕ್ಷಮಾಪಣೆ ಪತ್ರಗಳನ್ನು ಬರೆದು, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ ಹಿಂದುತ್ವದ ಪ್ರತಿಪಾದಕ ಸಾವರ್ಕರ್ ಹೆಸರನ್ನು ಸುರತ್ಕಲ್ ನಗರಕ್ಕೆ ಇಡುವ ಪ್ರಸ್ತಾವ ಸಲ್ಲಿಸುವ ಮೂಲಕ ಅನಗತ್ಯ ವಿವಾದಗಳನ್ನು ಉಂಟುಮಾಡಿ ಕ್ಷೇತ್ರದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅನಗತ್ಯ ವಿಚಾರಗಳ ಬಗ್ಗೆ ನಿರ್ಣಯ ಮಂಡಿಸಲು ಹೊರಟರೆ ಅದಕ್ಕೆ ಯಾವುದೇ ಕಾರಣಕ್ಕೂ ಎಸ್‌ಡಿಪಿಐ ಅವಕಾಶ ನೀಡುವುದಿಲ್ಲ. ಕೋಮಸೂಕ್ಷ್ಮ ಪ್ರದೇಶವಾದ ಸುರತ್ಕಲ್ ಸದ್ಯ ಹಲವಾರು ವರ್ಷಗಳಿಂದ ಶಾಂತಿಯಿಂದ ಇದೆ ಇಂತಹ ಕಡೆಗಳಲ್ಲಿ ಬಿಜೆಪಿಯವರು ಅಶಾಂತಿ ಸೃಷ್ಟಿಸಲು ವ್ಯವಸ್ಥಿತ ಹುನ್ನಾರಗಳನ್ನು ನಡೆಸುತ್ತಿದೆ. ಇದಕ್ಕೆ ಜಿಲ್ಲಾಡಳಿತ, ಮತ್ತು ಮಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿ ಸಂವಿದಾನ ಹಾಗೂ ಕಾನೂನಿಗೆ ಅಪಚಾರ ಎಸಗಬಾರದು ಎಂದು ಎಸ್‌ಡಿಪಿಐ ಆಗ್ರಹಿಸುತ್ತಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





