ಮುಂದಿನ ವರ್ಷದೊಳಗೆ 500 ಕೋ.ಡೋಸ್ ಕೋವಿಡ್ ಲಸಿಕೆ ತಯಾರಿಸಲು ಭಾರತ ಸಿದ್ಧ: ಪ್ರಧಾನಿ ಮೋದಿ

ಹೊಸದಿಲ್ಲಿ,ಅ.31: ವಿಶ್ವಾದ್ಯಂತ ಲಸಿಕೆ ಅಸಮಾನತೆಯನ್ನು ನಿವಾರಿಸುವ ಅಗತ್ಯಕ್ಕೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಭಾರತವು ಮುಂದಿನ ವರ್ಷದ ಅಂತ್ಯದೊಳಗೆ ಕೋವಿಡ್ ಲಸಿಕೆಯ 500 ಕೋ.ಡೋಸ್‌ಗಳನ್ನು ತಯಾರಿಸಲು ಸಿದ್ಧವಾಗಿದೆ ಎಂದು ಇಟಲಿಯ ರೋಮ್‌ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಹೇಳಿದ್ದಾರೆ.
ಶನಿವಾರ ಜಾಗತಿಕ ಆರ್ಥಿಕತೆ ಮತ್ತು ಜಾಗತಿಕ ಆರೋಗ್ಯ ಕುರಿತು ಮೊದಲ ಅಧಿವೇಶನದಲ್ಲಿ ಮಾತನಾಡಿದ ಮೋದಿ,ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯು ಶೀಘ್ರ ಲಭಿಸಿದರೆ ಅದು ಇತರ ದೇಶಗಳಿಗೆ ನೆರವಾಗುವ ಭಾರತದ ಪ್ರಯತ್ನಗಳಿಗೆ ಪೂರಕವಾಗುತ್ತದೆ ಎಂದರು.
ಅಧಿವೇಶನದಲ್ಲಿ ಮೋದಿಯವರ ಭಾಷಣದ ವಿವರಗಳನ್ನು ಸುದ್ದಿಗಾರರಿಗೆ ನೀಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರು,ಭಾರತವು ತನ್ನ ಪ್ರಜೆಗಳಿಗೆ ಶತಕೋಟಿ ಡೋಸ್ ಲಸಿಕೆಯನ್ನು ವಿತರಿಸಿರುವುದು ಮಾತ್ರವಲ್ಲ,ನಾವು ಮುಂದಿನ ವರ್ಷದ ಅಂತ್ಯದೊಳಗೆ ಐದು ಶತಕೋಟಿ ಡೋಸ್‌ಗೂ ಹೆಚ್ಚಿನ ಲಸಿಕೆಯನ್ನು ತಯಾರಿಸಲು ಸಿದ್ಧವಾಗಿದ್ದೇವೆ ಎನ್ನುವುದು ಹೆಚ್ಚು ಮುಖ್ಯವಾಗಿದೆ ಎಂದು ಮೋದಿ ಜಿ-20 ನಾಯಕರಿಗೆ ತಿಳಿಸಿದರು ಎಂದರು.
ಇದು ನಮ್ಮ ಪ್ರಜೆಗಳಿಗೆ ಮಾತ್ರವಲ್ಲ,ಇತರ ದೇಶಗಳಿಗೂ ಲಭ್ಯವಾಗಲಿದೆ ಎಂದು ಮೋದಿಯವರನ್ನು ಉಲ್ಲೇಖಿಸಿ ಹೇಳಿದ ಶ್ರಿಂಗ್ಲಾ,ಇದು ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಲಸಿಕೆ ಅಸಮಾನತೆಯನ್ನು ಕಡಿಮೆಗೊಳಿಸಲು ನಮ್ಮ ಸ್ವಂತ ಕೊಡುಗೆಯಾಗಲಿದೆ ಎಂದು ತಿಳಿಸಿದರು.
ಲಸಿಕೆ ಸಂಶೋಧನೆ,ತಯಾರಿಕೆ ಮತ್ತು ವಿನೂತನತೆಗೆ ಒತ್ತು ನೀಡಿದ ಪ್ರಧಾನಿಯವರು,ಅಂತರ್ ರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ಮತ್ತು ಇದನ್ನು ಸಾಧಿಸಲು ಲಸಿಕೆ ಪ್ರಮಾಣೀಕರಣಕ್ಕೆ ಪರಸ್ಪರ ಮಾನ್ಯತೆ ನೀಡುವ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದ ಕೊಡುಗೆಯನ್ನು ಪ್ರಮುಖವಾಗಿ ಬಿಂಬಿಸಿದ ಮೋದಿ,ಈ ನಿಟ್ಟಿನಲ್ಲಿ 150ಕ್ಕೂ ಹೆಚ್ಚಿನ ದೇಶಗಳಿಗೆ ಭಾರತದಿಂದ ಔಷಧಿಗಳ ಪೂರೈಕೆಯನ್ನು ಉಲ್ಲೇಖಿಸಿದರು.
‘ಒಂದು ಭೂಮಿ ಒಂದು ಆರೋಗ್ಯ’ ಅಥವಾ ಕೋವಿಡ್ ವಿರುದ್ಧ ದೇಶಗಳ ಒಗ್ಗಟ್ಟಿನ ಹೋರಾಟದ ಅಗತ್ಯದ ಕುರಿತು ಭಾರತದ ದೃಷ್ಟಿಕೋನದ ಬಗ್ಗೆಯೂ ಮಾತನಾಡಿದ ಮೋದಿ,‘ಒಂದು ಭೂಮಿ ಒಂದು ಆರೋಗ್ಯ’ ಪರಿಕಲ್ಪನೆಯನ್ನು ಜಿ-20 ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಹೇಳಿದರು.
ಪುಟಿದೇಳಬಲ್ಲ ಜಾಗತಿಕ ಪೂರೈಕೆ ಸರಪಳಿಯ ಅಗತ್ಯಕ್ಕೆ ಒತ್ತು ನೀಡಿದ ಅವರು,ಆರ್ಥಿಕ ಚೇತರಿಕೆ ಮತ್ತು ಪೂರೈಕೆ ಸರಪಳಿ ವೈವಿಧ್ಯೀಕರಣದಲ್ಲಿ ಭಾರತವನ್ನು ತಮ್ಮ ಪಾಲುದಾರನಾಗಿ ಮಾಡಿಕೊಳ್ಳುವಂತೆ ಜಿ-20 ದೇಶಗಳನ್ನು ಆಹ್ವಾನಿಸಿದರು.
ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಹೆಚ್ಚು ನ್ಯಾಯಸಮ್ಮತವಾಗಿಸಲು ಶೇ.15ರಷ್ಟು ಕನಿಷ್ಠ ಕಾರ್ಪೊರೇಟ್ ತೆರಿಗೆಯನ್ನು ಚಾಲ್ತಿಗೆ ತರುವ ಜಿ-20 ದೇಶಗಳ ನಿರ್ಧಾರದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದ ಮೋದಿ, ಕಂಪನಿಗಳು ತಮ್ಮ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಕನಿಷ್ಠ ಸಾಧ್ಯ ತೆರಿಗೆ ಸ್ವರ್ಗ ದೇಶಗಳನ್ನು ಬಳಸಿಕೊಳ್ಳುವುದನ್ನು ಇದು ತಡೆಯುತ್ತದೆ ಮತ್ತು ಬೃಹತ್ ಬಹುರಾಷ್ಟ್ರೀಯ ಕಂಪನಿಗಳು ತಾವಿರುವ ದೇಶಗಳಲ್ಲಿ ತಮ್ಮ ಪಾಲಿನ ತೆರಿಗೆಗಳನ್ನು ಪಾವತಿಸುವಂತೆ ಮಾಡುತ್ತದೆ ಎಂದರು.
ಬೃಹತ್ ಕಂಪನಿಗಳು ತೆರಿಗೆಗಳಿಂದ ತಪ್ಪಿಸಿಕೊಳ್ಳಲು ತಮ್ಮ ಲಾಭಗಳನ್ನು ಮತ್ತು ಉದ್ಯೋಗಗಳನ್ನು ಗಡಿಗಳಾಚೆ ವರ್ಗಾವಣೆಗೊಳಿಸುವುದನ್ನು ತಡೆಯುವ ಮಹತ್ವದ ಜಾಗತಿಕ ಒಪ್ಪಂದವೊಂದನ್ನು ಜಿ-20 ನಾಯಕರು ಶನಿವಾರ ಅನುಮೋದಿಸಿದ್ದಾರೆ.







