ವಿಶ್ವಕಪ್:ನ್ಯೂಝಿಲ್ಯಾಂಡ್ಗೆ 111 ರನ್ ಗುರಿ ನೀಡಿದ ಭಾರತ
photo: ICC
ದುಬೈ, ಅ.31: ಐಸಿಸಿ ಟ್ವೆಂಟಿ-20 ವಿಶ್ವಕಪ್ನಲ್ಲಿ ಸೂಪರ್-12ರ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ಗೆಲುವಿಗೆ 111 ರನ್ ಗುರಿ ನೀಡಿದೆ.
ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ವೇಗದ ಬೌಲರ್ ಟ್ರೆಂಟ್ ಬೌಲ್ಟ್(3-20) ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 110 ರನ್ ಗಳಿಸಲಷ್ಟೇ ಶಕ್ತವಾಯಿತು.
ದಯನೀಯ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಭಾರತದ ಪರ ರವೀಂದ್ರ ಜಡೇಜ(ಔಟಾಗದೆ 26), ಹಾರ್ದಿಕ್ ಪಾಂಡ್ಯ(23),ಕೆ.ಎಲ್.ರಾಹುಲ್(18), ರೋಹಿತ್ ಶರ್ಮಾ(14)ಹಾಗೂ ರಿಷಭ್ ಪಂತ್(12) ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 9 ರನ್ ಗಳಿಸಿ ಸ್ಪಿನ್ನರ್ ಸೋಧಿಗೆ ವಿಕೆಟ್ ಒಪ್ಪಿಸಿದರು.
ಭಾರತದ ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್(4) ಹಾಗೂ ರಾಹುಲ್ 2.5ನೇ ಓವರ್ನಲ್ಲಿ ಬೇರ್ಪಟ್ಟರು. ಸೂರ್ಯಕುಮಾರ್ ಯಾದವ್ ಬದಲಿಗೆ ಆಡುವ 11ರ ಬಳಗ ಸೇರಿದ್ದ ಕಿಶನ್ ಮಿಂಚಲು ವಿಫಲರಾದರು. ಕಿವೀಸ್ ಬೌಲಿಂಗ್ ವಿಭಾಗದಲ್ಲಿ ಐಶ್ ಸೋಧಿ(2-17) ಎರಡು ವಿಕೆಟ್ ಪಡೆದರು. ಸೌಥೀ(1-26) ಹಾಗೂ ಮಿಲ್ನೆ(1-30) ತಲಾ ಒಂದು ವಿಕೆಟ್ ಪಡೆದರು.